ನಾಳೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು

Update: 2020-09-29 16:38 GMT

ಹೊಸದಿಲ್ಲಿ,ಸೆ.29: ಅಯೋಧ್ಯೆಯ ಬಾಬ್ರಿ ಮಸೀದಿ 1992ರ ಡಿ.6ರಂದು ಧ್ವಂಸಗೊಂಡ 28 ವರ್ಷಗಳ ಬಳಿಕ ಬುಧವಾರ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣದಲ್ಲಿ ತೀರ್ಪನ್ನು ಪ್ರಕಟಿಸಲಿದೆ.

ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರಂತಹ ಹಿರಿಯ ಬಿಜೆಪಿ ನಾಯಕರು ಪ್ರಕರಣದ ಆರೋಪಿಗಳಲ್ಲಿ ಸೇರಿದ್ದಾರೆ.

ತೀರ್ಪಿನ ದಿನದಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಕೆ.ಯಾದವ ಅವರು ಸೆ.16ರಂದು ಎಲ್ಲ 32 ಬದುಕಿರುವ ಆರೋಪಿಗಳಿಗೆ ನಿರ್ದೇಶ ನೀಡಿದ್ದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ,ಬಿಜೆಪಿ ನಾಯಕರಾದ ವಿನಯ ಕಟಿಯಾರ್ ಮತ್ತು ಸಾಧ್ವಿ ರಿತಂಬರಾ ಅವರೂ ಆರೋಪಿಗಳಲ್ಲಿ ಸೇರಿದ್ದಾರೆ.

ಉಮಾ ಭಾರತಿ ಮತ್ತು ಕಲ್ಯಾಣ ಸಿಂಗ್ ಅವರು ಕೊರೋನ ವೈರಸ್ ಸೋಂಕಿನ ಬಳಿಕ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದು, ತೀರ್ಪಿನ ಪ್ರಕಟಣೆಯ ವೇಳೆ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿರುತ್ತಾರೆಯೇ ಎನ್ನುವುದು ಗೊತ್ತಾಗಿಲ್ಲ. ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು. ರಾಜಸ್ಥಾನದ ರಾಜ್ಯಪಾಲರಾಗಿ ಸಿಂಗ್ ಅಧಿಕಾರಾವಧಿ ಅಂತ್ಯಗೊಂಡ ಬಳಿಕ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅವರ ವಿಚಾರಣೆ ಆರಂಭಗೊಂಡಿತ್ತು.

ಪ್ರಕರಣದಲ್ಲಿ ತೀರ್ಪನ್ನು ಪ್ರಕಟಿಸಲು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಆ.31ರ ಗಡುವು ವಿಧಿಸಿದ್ದ ಸರ್ವೋಚ್ಚ ನ್ಯಾಯಾಲಯವು ಬಳಿಕ ಅದನ್ನು ಒಂದು ತಿಂಗಳು ವಿಸ್ತರಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ದೈನಂದಿನ ವಿಚಾರಣೆಯನ್ನು ಆರಂಭಿಸಿತ್ತು.

ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು. ಒಟ್ಟು 48 ಜನರ ವಿರುದ್ಧ ಆರೋಪಗಳನ್ನು ರೂಪಿಸಲಾಗಿತ್ತಾದರೂ,ಅವರ ಪೈಕಿ 16 ಆರೋಪಿಗಳು ವಿಚಾರಣೆಯ ಅವಧಿಯಲ್ಲಿ ನಿಧನರಾಗಿದ್ದಾರೆ.

ವಿಚಾರಣಾ ನ್ಯಾಯಾಲಯವು 2001ರಲ್ಲಿ ಆರೋಪಿಗಳ ವಿರುದ್ಧದ ಗಂಭೀರ ಕ್ರಿಮಿನಲ್ ಒಳಸಂಚು ಆರೋಪಗಳನ್ನು ಕೈಬಿಟ್ಟಿತ್ತು. ಈ ತೀರ್ಪನ್ನು 2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು ಆರೋಪಿಗಳ ವಿರುದ್ಧ ಒಳಸಂಚು ಆರೋಪವನ್ನು ಮರುಸ್ಥಾಪಿಸುವಂತೆ 2017,ಎ.19ರಂದು ಆದೇಶಿಸಿತ್ತು. ಪ್ರಕರಣದಲ್ಲಿ ದೈನಂದಿನ ವಿಚಾರಣೆಗೆ ಆದೇಶಿಸಿದ್ದ ಅದು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ವಿಶೇಷ ನ್ಯಾಯಾಧೀಶರಿಗೆ ನಿರ್ದೇಶ ನೀಡಿತ್ತು. ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದ ಆರೋಪದಲ್ಲಿ ವಿಚಾರಣೆ ಅದಾಗಲೇ ನಡೆಯುತ್ತಿದ್ದು,ಇದರೊಂದಿಗೆ ಹೆಚ್ಚುವರಿಯಾಗಿ ಒಳಸಂಚು ಆರೋಪವನ್ನು ಸೇರಿಸಲಾಗಿತ್ತು.

ಆರೋಪಿಗಳು ರಾಷ್ಟ್ರೀಯ ಸಮಗ್ರತೆಗೆ ಹಾನಿಕಾರಕ ಭಾಷಣಗಳನ್ನು ಮಾಡಿದ್ದ, ಆರಾಧನಾ ಸ್ಥಳವನ್ನು ಹಾನಿಗೊಳಿಸಿದ್ದ ಅಥವಾ ಅಪವಿತ್ರಗೊಳಿಸಿದ್ದ,ಧಾರ್ಮಿಕ ಭಾವನೆಗಳನ್ನು ಅವಮಾನಿಸಲು ದುರುದ್ದೇಶಪೂರ್ವಕ ಕೃತ್ಯಗಳಲ್ಲಿ ತೊಡಗಿದ್ದ,ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳನ್ನು ನೀಡಿದ್ದ,ದಂಗೆ ಮತ್ತು ಅಕ್ರಮ ಕೂಟ ಇತ್ಯಾದಿ ಆರೋಪಗಳನ್ನೂ ಎದುರಿಸುತ್ತಿದ್ದಾರೆ. ಆರೋಪಿಗಳು ಒಳಸಂಚು ರೂಪಿಸಿದ್ದರು ಮತ್ತು 16ನೇ ಶತಮಾನದ ಮಸೀದಿಯನ್ನು ನೆಲಸಮಗೊಳಿಸಲು ಕರಸೇವಕರನ್ನು ಪ್ರಚೋದಿಸಿದ್ದರು ಎಂದು ಸಿಬಿಐ ವಾದಿಸಿತ್ತು. ತಾವು ಅಮಾಯಕರಾಗಿದ್ದೇವೆ, ತಾವು ತಪ್ಪುಗಳನ್ನು ಮಾಡಿದ್ದೇವೆನ್ನಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ರಾಜಕೀಯ ಪ್ರತೀಕಾರವಾಗಿ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಆರೋಪಿಗಳು ಪ್ರತಿಪಾದಿಸಿದ್ದರು.

ಸರ್ವೋಚ್ಚ ನ್ಯಾಯಾಲಯದ 2017ರ ತೀರ್ಪಿಗೆ ಮುನ್ನ ಲಕ್ನೋ ಮತ್ತು ರಾಯಬರೇಲಿ ನ್ಯಾಯಾಲಯಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಅಪರಿಚಿತ ‘ಕರಸೇವಕ’ರನ್ನೊಳಗೊಂಡ ಪ್ರಕಣದ ವಿಚಾರಣೆ ಲಕ್ನೋದಲ್ಲಿ ನಡೆಯುತ್ತಿದ್ದರೆ, ಅಡ್ವಾಣಿ, ಜೋಶಿ,ವಿಷ್ಣು ಹರಿ ದಾಲ್ಮಿಯಾ, ಅಶೋಕ ಸಿಂಘಾಲ್, ಕಟಿಯಾರ್, ಉಮಾಭಾರತಿ, ಗಿರಿರಾಜ ಕಿಶೋರ ಮತ್ತು ಸಾಧ್ವಿ ರಿತಂಬರಾ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕ್ರಿಮಿನಲ್ ಒಳಸಂಚು ಆರೋಪವನ್ನು ಮರುಸ್ಥಾಪಿಸಿದ್ದ ಸರ್ವೋಚ್ಚ ನ್ಯಾಯಾಲಯವು ಎರಡೂ ಪ್ರಕರಣಗಳನ್ನು ಒಂದುಗೂಡಿಸುವಂತೆ ಮತ್ತು ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News