ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ: ಒಂದು ಸಾವಿರ ಮಂದಿಗೆ ಒಂದು ಮತಗಟ್ಟೆ

Update: 2020-09-29 18:18 GMT

ಬೆಂಗಳೂರು, ಸೆ.29: ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗವು ಈ ಬಾರಿಯ ಚುನಾವಣೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. 1 ಮತಗಟ್ಟೆಯಲ್ಲಿ 1 ಸಾವಿರ ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ನೀಡಿದೆ ಎಂದು ಬೆಂಗಳೂಯ ನಗರ ಜಿಲ್ಲಾ ಚುಣಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ 381 ಮತಗಟ್ಟೆಗಳಿದ್ದು, ಒಟ್ಟು 4,60,401 ಮತದಾರರಿದ್ದಾರೆ. ಈ ಸಂಬಂಧ 307 ಮತಗಟ್ಟೆಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ಮತದಾರರಿದ್ದು, ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅದರಂತೆ ಒಟ್ಟು 688 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಅ.9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅ.16ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. 17ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. 19ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದ್ದು, ನ.3ರಂದು ಮತದಾನ ನಡೆಯಲಿದೆ. ನ.10ರಂದು ಮತಗಳ ಎಣಿಕೆ ನಡೆಯಲಿದ್ದು, 12ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ. ನಾಮಪತ್ರಗಳನ್ನು ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತರು ರವರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ನಾಮಪತ್ರ ಸಲ್ಲಿಸುವಾಗ 5 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಕೋವಿಡ್ ಇರುವ ಹಿನ್ನೆಲೆ ಇಬ್ಬರಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕ ಸಭೆ, ಪ್ರಚಾರ ಕಾರ್ಯಗಳಿಗೆ ನಿರ್ಬಂಧವಿರಲಿದೆ. ಸಾರ್ವಜನಿಕ ಸಭೆಗೆ ಅನುಮತಿ ಪಡೆಯಬೇಕು. ವಿವಿಎಂ, ವಿವಿ ಪ್ಯಾಟ್‍ಗಳು ಸಿದ್ಧವಿದ್ದು, 3 ಹಂತಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಮಾದರಿ ನೀತಿ ಸಂಹಿತೆ(ಎಂ.ಸಿ.ಸಿ) ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳಿಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುವುದು. ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೊರೋನ ಹಿನ್ನೆಲೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಕೋವಿಡ್ ಪ್ರಕ್ರಿಯೆ ಮೇಲೆ ನಿಗಾವಹಿಸಲು ಆರೋಗ್ಯ ವೈದ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು. ಮತಗಟ್ಟೆಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು, ಸಿಬ್ಬಂದಿಗೆ ಗ್ಲೌಸ್, ಮಾಸ್ಕ್ ವಿತರಣೆ, ಮತದಾನದ ದಿನ ಸಿಬ್ಬಂದಿಗೆ ಫೇಸ್ ಶೀಲ್ಡ್ ವಿತರಿಸಲಾಗುತ್ತದೆ. ಮತದಾನ ಮಾಡಲು ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್ ಸ್ಯಾನಿಟೈಸ್ ಮಾಡಲಾಗುತ್ತದೆ. ಮತಗಟ್ಟೆಗಳ ಬಳಿ ಪುರಷ, ಮಹಿಳೆ, ವಿಕಲ ಚೇತನರಿಗೆ ಪ್ರತ್ಯೇಕ ಮೂರು ಸಾಲುಗಳನ್ನು ಮಾಡಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮಾಕಿರ್ಂಗ್ ಮಾಡಲಾಗುತ್ತದೆ. ಮತದಾನದ ದಿನ ಸಾಲಿನಲ್ಲಿ ನಿಲ್ಲದೇ ಇರುವವರು ಹೆಲ್ಸ್ ಡೆಸ್ಕ್ ನಲ್ಲಿ ಟೋಕನ್ ಪಡೆದು ಸಂಜೆ ಮತಗಟ್ಟೆಗೆ ಬಂದು ಮತ ಹಾಕಬಹುದು ಎಂದು ಮಾಹಿತಿ ನೀಡಿದರು.

80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್

ಮತದಾನ ಮಾಡುವ ದಿನ ಸೋಂಕು ದೃಢಪಟ್ಟವರು, ಶಂಕಿತರು ಹಾಗೂ ಗೃಹಬಂಧನದಲ್ಲಿರುವವರು ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಜೊತೆಗೆ 80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತದಾನ ಮಾಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News