ಎಲ್‌ಎಸಿ ಕುರಿತ 1959ರ ಏಕಪಕ್ಷೀಯ ವ್ಯಾಖ್ಯಾನವನ್ನು ಭಾರತ ಒಪ್ಪಿಕೊಂಡಿಲ್ಲ: ಚೀನಾದ ನಿಲುವಿಗೆ ಭಾರತದ ಪ್ರತಿಕ್ರಿಯೆ

Update: 2020-09-29 18:30 GMT

ಹೊಸದಿಲ್ಲಿ, ಸೆ.29: ಭಾರತ-ಚೀನಾ ಗಡಿಭಾಗದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಕುರಿತು 1959ರಲ್ಲಿ ಏಕಪಕ್ಷೀಯವಾಗಿ ಮಾಡಲಾಗಿರುವ ವ್ಯಾಖ್ಯಾನವನ್ನು ಭಾರತ ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

 ಹಿಂದುಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ವಿದೇಶ ವ್ಯವಹಾರ ಇಲಾಖೆ, ವಾಸ್ತವಿಕ ನಿಯಂತ್ರಣ ರೇಖೆಯ ಕುರಿತ ಚೀನಾದ ಏಕಪಕ್ಷೀಯ ವ್ಯಾಖ್ಯಾನವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಚೀನಾದ ಮುಖಂಡ ಚೌ ಎನ್‌ಲಾಯ್ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂಗೆ 1959ರ ನವೆಂಬರ್ 7ರಂದು ಬರೆದಿದ್ದ ಪತ್ರದಲ್ಲಿ ಪ್ರಸ್ತಾವಿಸಿದ್ದ ವಾಸ್ತವಿಕ ನಿಯಂತ್ರಣ ರೇಖೆಯ ಬಗ್ಗೆ ಚೀನಾ ಬದ್ಧವಾಗಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆ ಹೇಳಿರುವುದಾಗಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿತ್ತು.

1959ರ ಎಲ್‌ಎಸಿ ಎಂದು ಹೇಳಲಾದ ಏಕಪಕ್ಷೀಯ ವ್ಯಾಖ್ಯಾನವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಭಾರತದ ಈ ನಿಲುವು ದೃಢವಾಗಿದೆ ಮತ್ತು ಚೀನಾ ಸಹಿತ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

   ಎಲ್‌ಎಸಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಳ್ಳುವ 1993ರ ಒಪ್ಪಂದ, ಯುದ್ಧರಂಗದಲ್ಲಿ ವಿಶ್ವಾಸಾರ್ಹತೆ ವೃದ್ಧಿಸುವ ಕ್ರಮಗಳ ಕುರಿತ 1996ರ ಒಪ್ಪಂದ, ಭಾರತ-ಚೀನಾ ಗಡಿ ಸಮಸ್ಯೆ ಇತ್ಯರ್ಥಕ್ಕೆ ರಾಜಕೀಯ ಮಾನದಂಡ ಹಾಗೂ ಮಾರ್ಗದರ್ಶಿ ಸೂತ್ರದ 2005ರ ಒಪ್ಪಂದ ಸೇರಿದಂತೆ ಹಲವು ದ್ವಿಪಕ್ಷೀಯ ಒಪ್ಪಂದಗಳಲ್ಲಿ ಭಾರತ -ಚೀನಾಗಳು ಎಲ್‌ಎಸಿಯ ದೃಢೀಕರಣ ಮತ್ತು ಸ್ಪಷ್ಟತೆ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಿರಲು ಬದ್ಧವಾಗಿರಬೇಕೆಂದು ತಿಳಿಸಿದೆ . ಈಗ ಚೀನಾ ಮಾಡುತ್ತಿರುವ ಮೊಂಡುವಾದ ಈ ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

 ವಾಸ್ತವಿಕ ನಿಯಂತ್ರಣ ರೇಖೆಯನ್ನು ಸ್ಪಷ್ಟಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ಮಧ್ಯೆ 2003ರವರೆಗೆ ಹಲವು ಮಾತುಕತೆ ನಡೆದಿದೆ. ಆದರೆ ಮಾತುಕತೆ ಮುಂದುವರಿಸಿಕೊಂಡು ಹೋಗಲು ಚೀನಾ ನಿರಾಸಕ್ತಿ ತೋರಿದೆ ಎಂದವರು ಆರೋಪಿಸಿದರು. ಉಭಯ ದೇಶಗಳ ಮಧ್ಯೆ ಏರ್ಪಟ್ಟಿರುವ ಹಲವು ಒಪ್ಪಂದದ ಆಧಾರದಲ್ಲೇ ಗಡಿಭಾಗದಲ್ಲಿ ಈಗ ನೆಲೆಸಿರುವ ಬಿಕ್ಕಟ್ಟು ಪರಿಹಾರವಾಗಬೇಕು ಎಂದು ಪದೇಪದೇ ಹೇಳುತ್ತಿದ್ದ ಚೀನಾ , ಈಗ ಏಕಾಏಕಿ ನಿಲುವು ಬದಲಿಸಿ, 1959ರ ಏಕಪಕ್ಷೀಯ ನಿಲುವನ್ನು ಉಲ್ಲೇಖಿಸಿದೆ. ಸೆಪ್ಟಂಬರ್ 10ರಂದು ಮಾಸ್ಕೋದಲ್ಲಿ ನಡೆದ ಶಾಂೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹಾಗೂ ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ಮಧ್ಯೆ ನಡೆದ ಸಭೆಯಲ್ಲೂ ಚೀನಾ ಎಲ್ಲಾ ಒಪ್ಪಂದಗಳಿಗೆ ಬದ್ಧತೆಯನ್ನು ಪುನರುಚ್ಚರಿಸಿತ್ತು ಎಂದು ಶ್ರೀವಾಸ್ತವ ಹೇಳಿದ್ದಾರೆ.

 ಭಾರತ ಯಾವತ್ತೂ ಎಲ್‌ಎಸಿಯನ್ನು ಗೌರವಿಸಿದೆ ಮತ್ತು ಈ ಕುರಿತ ಒಪ್ಪಂದಕ್ಕೆ ಬದ್ಧವಾಗಿದೆ. ಆದ್ದರಿಂದ ಚೀನಾ ಕೂಡಾ ಎಲ್ಲಾ ಒಪ್ಪಂದಗಳನ್ನೂ ಪ್ರಾಮಾಣಿಕವಾಗಿ ಗೌರವಿಸುತ್ತದೆ ಮತ್ತು ಎಲ್‌ಎಸಿಯ ಕುರಿತು ಏಕಪಕ್ಷೀಯ ವ್ಯಾಖ್ಯಾನಕ್ಕೆ ಅಂಟಿಕೊಳ್ಳುವುದಿಲ್ಲ ಎಂಬ ನಿರೀಕ್ಷೆಯಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News