ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ವೈದ್ಯಕೀಯ ಉಪಕರಣ ಹಸ್ತಾಂತರ

Update: 2020-09-29 18:34 GMT

ಬೆಂಗಳೂರು, ಸೆ.29: ಆರ್‍ಟಿಪಿಸಿಆರ್ ಮಷಿನ್, ಎಚ್‍ಎಫ್‍ಎನ್‍ಸಿ ಮಷಿನ್‍ಗಳು ಸೇರಿದಂತೆ ಇತರೆ ವೈದ್ಯಕೀಯ ಉಪಕರಣಗಳನ್ನು ಎಕ್ಸಾನ್ ಮೊಬಿಲ್ ಹಾಗೂ 3ಎಂ ಕಂಪನಿ ಸಹಯೋಗದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಸಮ್ಮುಖದಲ್ಲಿ ಇಲಾಖೆಗೆ ಹಸ್ತಾಂತರಿಸಲಾಯಿತು.

ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಮಂಗಳವಾರ ಕಂಪನಿಯ ಮುಖ್ಯಸ್ಥರು ಸಚಿವರಿಗೆ ಹಸ್ತಾಂತರಿಸಿದರು. 1.53 ಕೋಟಿ ಮೌಲ್ಯದ 31 ಎಚ್‍ಎಫ್‍ಎನ್‍ಸಿ ಮಷಿನ್, 10 ಆಕ್ಸಿಜನ್ ಕಾನ್ಸಂಟ್ರೇಟ್, 4 ಆರ್‍ಟಿಪಿಸಿಆರ್ ಮಷಿನ್ ಹಾಗೂ 2 ಸಾವಿರ ಪಲ್ಸ್ ಆಕ್ಸಿಮೀಟರ್ಸ್‍ಗಳನ್ನು ಇಲಾಖೆಗೆ ನೀಡಲಾಯಿತು.

ಸಿಎಸ್‍ಆರ್(ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ) ನಿಧಿಯಿಂದ ಕೊಡುಗೆಯಾಗಿ ನೀಡಿರುವ ಈ ವೈದ್ಯಕೀಯ ಉಪಕರಣಗಳನ್ನು ವಿಕ್ಟೋರಿಯಾ ಆಸ್ಪತ್ರೆ, ಚಿಕ್ಕಬಳ್ಳಾಪುರ, ಬೀದರ್ ಮೆಡಿಕಲ್ ಸೈನ್ಸ್ ಇನ್‍ಸ್ಟಿಟ್ಯೂಟ್, ಶಂಕರ ಆಸ್ಪತ್ರೆ, ರಾಮನಗರ ಕೋವಿಡ್ ಆಸ್ಪತ್ರೆ ಹಾಗೂ ಕೊಡಗು ಜಿಲ್ಲಾಸ್ಪತ್ರೆಗೆ ಹಂಚಿಕೆ ಮಾಡಲಾಗುತ್ತದೆ.

ಈ ವೇಳೆ ಮಾತನಾಡಿದ ಸಚಿವರು, ಎಕ್ಸಾನ್‍ಮೊಬಿಲ್ ಹಾಗೂ 3ಎಂ ಕಂಪನಿಗಳ ಈ ಕೊಡುಗೆ ಶ್ಲಾಘನೀಯ ಎಂದರು. ಕೊರೋನ ನಿಯಂತ್ರಣದಲ್ಲಿ ಸರಕಾರದ ಜೊತೆಗೆ ಕಾರ್ಪೋರೇಟ್ ಕಂಪನಿಗಳು ಸಹ ಹೆಚ್ಚು ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಎಕ್ಸಾನ್ ಮೊಬಿಲ್ ಸರ್ವಿಸ್ ಮತ್ತು ಟೆಕ್ನಾಲಜಿ ಸಿಇಒ ನವೀನ್ ಶುಕ್ಲಾ, ಜಾಗತಿಕ ಭದ್ರತಾ ಸಲಹೆಗಾರ ಸೂರಜ್ ಮೆಲೂರ್ ರಮಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News