ಉದ್ಯಾನ ನಗರಿಗೆ ಸಂಸದರಿಂದ ಅವಮಾನ

Update: 2020-09-30 05:05 GMT

ಮಾಗಡಿಯ ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರವನ್ನು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಉದ್ಯಾನ ನಗರಿ ಎಂದು ವರ್ಣಿಸಿದ್ದರು. ಶಾಂತಿ ನೆಮ್ಮದಿಯ ತಾಣವೆಂದು ಹೆಸರಾಗಿದ್ದ ಇಂತಹ ನಗರವನ್ನು ಅದೇ ನಗರದ ದಕ್ಷಿಣ ಭಾಗವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ‘ಭಯೋತ್ಪಾದಕರ ನಗರ’, ‘ಉಗ್ರರ ಅಡಗು ತಾಣ’ ಎಂದೆಲ್ಲಾ ಕರೆದಿದ್ದಾರೆ. ಅಷ್ಟೇ ಅಲ್ಲ ಉಗ್ರರ ದಮನಕ್ಕಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.) ಶಾಶ್ವತ ವಿಭಾಗೀಯ ಕಚೇರಿಯನ್ನು ಆರಂಭಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಈ ಮನವಿಗೆ ಅಮಿತ್ ಶಾ ಅಸ್ತು ಎಂದಿದ್ದಾರೆ.

ಎಲ್ಲ ಕಾಸ್ಮೊಪಾಲಿಟನ್ ನಗರಗಳಂತೆ ಬೆಂಗಳೂರಿನಲ್ಲಿ ಜನಸಂಖ್ಯೆ ಒಂದೂವರೆ ಕೋಟಿಯನ್ನು ಸಮೀಪಿಸುತ್ತಿದೆ. ಇಂತಹ ದೊಡ್ಡ ನಗರಗಳಲ್ಲಿ ಸಣ್ಣಪುಟ್ಟ ಅಪರಾಧ ಚಟುವಟಿಕೆಗಳು ನಡೆಯುತ್ತಿರಬಹುದು. ಹಾಗೆಂದು ಈ ನಗರವನ್ನು ಭಯೋತ್ಪಾದಕರ ನಗರವೆಂದು ಕರೆಯುವುದು ಅತಿರೇಕವಾಗುತ್ತದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ನಡೆದಂತಹ ಕೆಲ ಸಣ್ಣಪುಟ್ಟ ಘಟನೆಗಳನ್ನು ನೆಪವಾಗಿಟ್ಟುಕೊಂಡು ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರಗಳನ್ನು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ನಡೆಸುತ್ತಾ ಬಂದಿವೆ. ಸಂಸದ ತೇಜಸ್ವಿ ಸೂರ್ಯ ಅವರಿಗೂ ಅಂತಹದೇ ಸಂಘಟನೆಗಳ ಹಿನ್ನೆಲೆ ಇರಬಹುದು, ಆದರೆ ಜನರಿಂದ ಚುನಾಯಿತರಾದ ಸಂಸದರೊಬ್ಬರು ಮಾತನಾಡುವಾಗ ಮೈ ಮೇಲೆ ಎಚ್ಚರವಿರಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಸದನದಲ್ಲಿ ಮತ್ತು ಹೊರಗೆ ಮಾತನಾಡುವಾಗ ವಿವೇಚನೆಯನ್ನು ಕಳೆದುಕೊಳ್ಳಬಾರದು. ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಗೆದ್ದು ಶಾಸನ ಸಭೆಗಳಿಗೆ ಹೋದ ನಂತರ ಆತ ಪಕ್ಷ ಭೇದ ಮೀರಿ ಎಲ್ಲ ಜನರ ಪ್ರತಿನಿಧಿ ತಾನೆಂಬುದನ್ನು ಮರೆಯಬಾರದು. ಮಾತಾಡುವಾಗ ಅಳೆದು ತೂಗಿ ಮಾತಾಡಬೇಕಾಗುತ್ತದೆ. ವಿಷಾದದ ಸಂಗತಿಯೆಂದರೆ ಬಿಜೆಪಿಯಿಂದ ಚುನಾಯಿತರಾಗಿ ಬಂದ ಕೆಲ ಸಂಸದರು ಆಡುವ ಮಾತುಗಳು ಅವರ ಘನತೆಗೆ ತಕ್ಕುದಾಗಿಲ್ಲ. ಕರ್ನಾಟಕಕ್ಕೆ ಬೆಂಕಿ ಹಚ್ಚುವುದಾಗಿ ಕರಾವಳಿಯ ಒಬ್ಬ ಸಂಸದರು ಹೇಳಿದ್ದರು. ಇನ್ನೊಬ್ಬ ಸಂಸದರು ಸಂವಿಧಾನವನ್ನು ಬದಲಿಸುವ ಮಾತಾಡಿದ್ದರು. ಈಗ ಸಂಸದ ತೇಜಸ್ವಿ ಸೂರ್ಯ ತನ್ನನ್ನು ಚುನಾಯಿಸಿದ ಜನರನ್ನೇ ‘ಭಯೋತ್ಪಾದಕರು’ ಎಂದು ಕರೆಯುವ ದಾರ್ಷ್ಟ್ಯ ತೋರಿಸಿದ್ದಾರೆ.

ಬೆಂಗಳೂರು ಹಿಂದೆ ಉದ್ಯಾನ ನಗರವಾಗಿದ್ದರೆ ಇಂದು ಐಟಿ ನಗರವೆಂದು ಹೆಸರಾಗಿದೆ. ಈ ನಗರದಲ್ಲಿರುವಷ್ಟು ವೈದ್ಯಕೀಯ ಸೌಕರ್ಯಗಳು ಇನ್ಯಾವ ನಗರಗಳಲ್ಲೂ ಇಲ್ಲ.ವಿದೇಶದಿಂದ ಇಲ್ಲಿ ಚಿಕಿತ್ಸೆಗೆ ಬರುತ್ತಾರೆ. ಜೊತೆಗೆ ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಹೆಸರಾದ ನಗರವಿದು. ಗುಜರಾತ್‌ನ ಅಹಮದಾಬಾದ್‌ನಂತೆ ಕೋಮು ಹತ್ಯಾಕಾಂಡಗಳು ನಡೆದ ಕರಾಳ ಚರಿತ್ರೆ ಈ ನಗರಕ್ಕಿಲ್ಲ. ಇಲ್ಲಿ ಎಂದೂ ಅಷ್ಟು ದೊಡ್ಡ ಪ್ರಮಾಣದ ಕೋಮು ಗಲಭೆಗಳು ನಡೆದಿಲ್ಲ. ಮಾಸ್ತಿ, ಡಿ.ವಿ.ಜಿ., ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್ ಅಂತಹವರು ಬದುಕಿದ, ದೊರೆಸ್ವಾಮಿಗಳಂತಹ ಗಾಂಧಿವಾದಿಗಳಿರುವ ಈ ನಗರದ ಜನ ಎಂದೂ ಪರಸ್ಪರ ಕಚ್ಚಾಡಿಲ್ಲ. ಹೊಡೆದಾಡಿಲ್ಲ. ಆದರೂ ಇಲ್ಲಿನ ಜನರನ್ನು ಭಯೋತ್ಪಾದಕರೆಂದು ಕರೆಯುವುದು ಸಂಸದರಿಗೆ ಶೋಭೆ ತರುವುದಿಲ್ಲ.

ಬೆಳೆಯುತ್ತಿರುವ ಬೆಂಗಳೂರಿಗೆ ತುರ್ತಾಗಿ ಬೇಕಾಗಿರುವುದು ಕೇಂದ್ರೀಯ ತನಿಖಾ ದಳವಲ್ಲ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಸ್) ಶಾಖೆ, ಇದಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡವನ್ನು ತಡೆಯಲು ಕಾರ್ಯ ಯೋಜನೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವರ್ತುಲ ರೈಲು, ಸುಪ್ರೀಂ ಕೋರ್ಟ್ ಪೀಠ, ಇಂತಹ ಆದ್ಯತೆಗಳನ್ನು ಬಿಟ್ಟು ಎನ್.ಐ.ಎ. ವಿಭಾಗೀಯ ಕಚೇರಿಯನ್ನು ಸಂಸದರು ಕೇಳುತ್ತಿರುವುದು ಯಾವ ಉದ್ದೇಶದಿಂದ? ಒಂದು ಸಮುದಾಯವನ್ನು ಹತ್ತಿಕ್ಕಲು ಈ ಶಾಂತಿಯ ತಾಣವನ್ನು ಭಯೋತ್ಪಾದಕರ ಅಡಗು ತಾಣವನ್ನಾಗಿ ಮಾಡುವ ಒಳ ಉದ್ದೇಶ ಈ ಸಂಸದರಿಗಿದೆಯೇ? ಅದರಲ್ಲೂ ತೇಜಸ್ವಿ ಸೂರ್ಯ ಆಡುವ ಮಾತುಗಳು ವಿವೇಚನಾಹೀನವಾಗಿರುತ್ತವೆ. ಹಿಂದೊಮ್ಮೆ ಅವರು ಸಾವರ್ಕರ್ ದೇಶದ್ರೋಹಿ ಎಂದಾದರೆ ಅಂಬೇಡ್ಕರ್ ಕೂಡ ದೇಶದ್ರೋಹಿ ಎಂದು ಕರೆದು ವಿವಾದಕ್ಕೆ ಕಾರಣವಾಗಿದ್ದರು.

 ಬಿಜೆಪಿಯಲ್ಲಿ ಈ ರೀತಿ ಬೆಂಕಿಯನ್ನು ಉಗುಳುವ ಮಾತುಗಾರರಿಗೆ ವಿಶೇಷ ಆದ್ಯತೆ.ಅಂತಲೇ ತೇಜಸ್ವಿ ಸೂರ್ಯ ಅವರ ಪ್ರಚೋದಕ ಮಾತುಗಳಿಗೆ ಬಹುಮಾನವಾಗಿ ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಸ್ಥಾನ ಮತ್ತು ಸಿ.ಟಿ. ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗಳು ದೊರಕಿವೆ. ಬಿಜೆಪಿಯಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಅಂತಿಮವಾಗಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರವೇ ತೀರ್ಮಾನಿಸುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಯ್ಕೆ ಕೂಡ ಇದೇ ಶಕ್ತಿ ಕೇಂದ್ರದ್ದು. ಸಂಘ ಪರಿವಾರ ತನ್ನ ಕಾರ್ಯಸೂಚಿಗೆ ಪೂರಕವಾಗಿರುವ ಪದಾಧಿಕಾರಿಗಳಿಗೆ ಆದ್ಯತೆ ನೀಡುವುದು ಅಸಹಜವೇನಲ್ಲ. ಆದರೆ ತೇಜಸ್ವಿ ಸೂರ್ಯ ಬರೀ ಬಿಜೆಪಿ ಪದಾಧಿಕಾರಿಯಲ್ಲ. ಸಂವಿಧಾತ್ಮಕವಾಗಿ ನಡೆದ ಚುನಾವಣೆಯಲ್ಲಿ ಗೆದ್ದ ಜನ ಪ್ರತಿನಿಧಿ. ಸಂಸದರಾದ ನಂತರ ಸ್ವೀಕರಿಸಿದ ಪ್ರಮಾಣಕ್ಕೆ ವ್ಯತಿರಿಕ್ತವಾಗಿ ಅವರು ನಡೆದುಕೊಳ್ಳಬಾರದು. ಅಧಿಕೃತ ಗುಪ್ತಚರ ಸಂಸ್ಥೆಗಳು ಕೂಡ ಬೆಂಗಳೂರನ್ನು ಉಗ್ರರ ತಾಣವೆಂದು ಕರೆದಿಲ್ಲ. ಹೀಗಿರುವಾಗ ಶಾಂತಿಪ್ರಿಯ ಬೆಂಗಳೂರು ನಗರವನ್ನು ಭಯೋತ್ಪಾದಕರ ತಾಣವೆಂದು ಹಿಯಾಳಿಸಿದ ಮಾತನ್ನು ಅವರು ವಾಪಸ್ ಪಡೆದು ತನ್ನನ್ನು ಚುನಾಯಿಸಿದ ಜನರ ಕ್ಷಮೆ ಕೇಳಲಿ, ಇಲ್ಲವೇ ಯಾರು ಭಯೋತ್ಪಾದಕರು ಎಂಬ ಬಗ್ಗೆ ತನ್ನ ಬಳಿ ಇರುವ ಪುರಾವೆಗಳನ್ನು ಒದಗಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News