28 ವರ್ಷಗಳಲ್ಲಿ ಹಲವು ತಿರುವು ಪಡೆದಿದ್ದ ಬಾಬರಿ ಮಸೀದಿ ದ್ವಂಸ ಪ್ರಕರಣ

Update: 2020-09-30 17:25 GMT

 ಹೊಸದಿಲ್ಲಿ, ಸೆ.30: ಅಯೋಧ್ಯೆಯಲ್ಲಿ ರಾಮದೇವರ ಜನ್ಮಸ್ಥಳವನ್ನು ಗುರುತಿಸಿದ ಪ್ರಾಚೀನ ದೇವಾಲಯದ ಅವಶೇಷದ ಮೇಲೆ 16ನೇ ಶತಮಾನದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ನಂಬಿದ್ದ ಸಾವಿರಾರು ‘ಕರಸೇವಕರು’ ಮಸೀದಿಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ 3,000 ಜನರು ಬಲಿಯಾಗಿದ್ದರು ಮತ್ತು ಈ ಘಟನೆ ಭಾರತದ ರಾಜಕೀಯ ಚಿತ್ರಣವನ್ನು ಶಾಶ್ವತವಾಗಿ ಬದಲಾಯಿಸಿತ್ತು.

 ಅಡ್ವಾಣಿಯ ರಥಯಾತ್ರೆಯ ಬಳಿಕ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು ಮತ್ತು ಈ ಸಂದರ್ಭ ಈಗ ಬದುಕುಳಿದಿರುವ ಆರೋಪಿಗಳಲ್ಲಿ ಅಡ್ವಾಣಿ, ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸಹಿತ 32 ಮಂದಿ ಸಮೀಪವೇ ಇದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಲ್ಲಿ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು, ಮಂದಿರ ನಿರ್ಮಾಣದ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದವರು ಭಾಷಣ ಮಾಡುತ್ತಿದ್ದರು. ಈ ಉದ್ರೇಕಕಾರಿ ಭಾಷಣ ಅಲ್ಲಿ ನೆರೆದಿದ್ದ ಗುಂಪನ್ನು ಪ್ರಚೋದಿಸಿದೆ ಎಂದು ತನಿಖಾ ತಂಡಗಳು ಆರೋಪಿಸಿದ್ದವು.

ಕಲ್ಯಾಣ್ ಸಿಂಗ್ ಆಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮಸೀದಿ ನೆಲಸಮವಾದ ಬಳಿಕ ದೇಶದಾದ್ಯಂತ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅವರ ಸರಕಾರವನ್ನು ವಜಾಗೊಳಿಸಲಾಗಿತ್ತು. 2020ರ ಜುಲೈ 24ರಂದು ಅಡ್ವಾಣಿಯ ವಿಚಾರಣೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದಿತ್ತು ಮತ್ತು ಅವರು ಆರೋಪವನ್ನು ನಿರಾಕರಿಸಿದ್ದರು. ಕಳೆದ 28 ವರ್ಷಗಳಲ್ಲಿ ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿತ್ತು. 1992ರಲ್ಲಿ ಎರಡು ಪ್ರಕರಣ ದಾಖಲಿಸಿದ್ದು ಬಳಿಕ ದಾಖಲಾದ ಪ್ರಕರಣಗಳ ಸಂಖ್ಯೆ 49ಕ್ಕೇರಿತ್ತು. ಎರಡನೇ ಪ್ರಕರಣ ಎಫ್‌ಐಆರ್ ನಂಬರ್ 198ರಲ್ಲಿ ಅಡ್ವಾಣಿ, ಜೋಷಿ ಮತ್ತು ಉಮಾ ಭಾರತಿ ವಿರುದ್ಧ ಧಾರ್ಮಿಕ ದ್ವೇಷತ್ವಕ್ಕೆ ಉತ್ತೇಜನ ನೀಡಿದ್ದು ಮತ್ತು ದಂಗೆಗೆ ಪ್ರೋತ್ಸಾಹ ನೀಡಿದ ಆರೋಪ ಹೊರಿಸಲಾಗಿತ್ತು. ಬಳಿಕ ಸುಪ್ರೀಂಕೋರ್ಟ್‌ನ ಸೂಚನೆಯಂತೆ ಕ್ರಿಮಿನಲ್ ಒಳಸಂಚು ಆರೋಪವನ್ನು ಸೇರಿಸಲಾಗಿತ್ತು. 1993ರಲ್ಲಿ ಸಿಬಿಐ ಎಲ್ಲಾ ಎಫ್‌ಐಆರ್‌ಗಳನ್ನೂ ಕ್ರೋಢೀಕರಿಸಿ ಒಂದೇ ಎಫ್‌ಐಆರ್ ದಾಖಲಿಸಿದ್ದು ಇದರಲ್ಲಿ ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆಯ ಹೆಸರನ್ನೂ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News