ಮೇಲ್ಮನವಿ ಬಗ್ಗೆ ಸಾಮೂಹಿಕ ಚರ್ಚೆಯ ಬಳಿಕ ನಿರ್ಧಾರ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2020-09-30 14:31 GMT

ಲಕ್ನೊ, ಸೆ.30: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಗತ್ಯವಿದೆಯೇ ಎಂಬುದನ್ನು ಮುಸ್ಲಿಂ ಸಮುದಾಯದ ಪ್ರತಿನಿಧಿ ಸಂಘಟನೆಗಳು ಸಾಮೂಹಿಕವಾಗಿ ಚರ್ಚಿಸಿ ನಿರ್ಧರಿಸಲಿವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಮಹಾಲಿ ಹೇಳಿದ್ದಾರೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನೂ ದೋಷಮುಕ್ತಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ತೀರ್ಪಿನ ಬಗ್ಗೆ ಹೇಳಲು ಏನೂ ಇಲ್ಲ. ಅಯೋಧ್ಯೆಯಲ್ಲಿ ಯಾವ ರೀತಿ ಕಾನೂನನ್ನು ಉಲ್ಲಂಘಿಸಿ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಹೇಗೆ ಧ್ವಂಸ ಮಾಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಯಾರಾದರೂ ತಪ್ಪಿತಸ್ಥರೇ ಅಥವಾ ಅಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ. ಈಗ ಮುಸ್ಲಿಂ ಸಂಘಟನೆಗಳು ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಬೇಕೇ ಎಂಬ ಬಗ್ಗೆ ಸಾಮೂಹಿಕವಾಗಿ ಚರ್ಚಿಸಿ ನಿರ್ಧರಿಸುತ್ತವೆ. ಮೇಲ್ಮನವಿ ಸಲ್ಲಿಸುವುದರಿಂದ ಯಾವುದಾದರೂ ಅನುಕೂಲವಾಗುವುದೇ ಎಂಬುದನ್ನು ಕಾಲವೇ ನಿರ್ಣಯಿಸಲಿದೆ ಎಂದವರು ಹೇಳಿದ್ದಾರೆ.

ಹೈಕೋರ್ಟ್‌ಗೆ ಮೇಲ್ಮನವಿ: ಜೀಲಾನಿ

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹಿರಿಯ ಸದಸ್ಯ ಝಪರ್ಯಾಬ್ ಜೀಲಾನಿ ಹೇಳಿದ್ದಾರೆ. ಮಸೀದಿ ಧ್ವಂಸಗೊಳಿಸುವ ಮುನ್ನ ಸಮೀಪದಲ್ಲಿದ್ದ ವೇದಿಕೆಯಲ್ಲಿ ರಾಜಕೀಯ, ಧಾರ್ಮಿಕ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದ್ದು ಆಗ ಆರೋಪಿಗಳು ವೇದಿಕೆಯಲ್ಲಿದ್ದರು ಎಂಬುದಕ್ಕೆ ಪ್ರತ್ಯಕ್ಷದರ್ಶಿಗಳು, ಐಪಿಎಸ್ ಅಧಿಕಾರಿಗಳು ಹಾಗೂ ಪತ್ರಕರ್ತರ ನೂರಾರು ಹೇಳಿಕೆಗಳ ಪುರಾವೆಗಳಿವೆ. ಅಡ್ವಾಣಿ ಹಾಗೂ ಇತರರ ವಿರುದ್ಧ 153-ಎ (ವಿಭಿನ್ನ ಸಮುದಾಯದ ಮಧ್ಯೆ ದ್ವೇಷತ್ವ ಮತ್ತು ವೈಷಮ್ಯಕ್ಕೆ ಉತ್ತೇಜನ) ಮತ್ತು 153-ಬಿ (ರಾಷ್ಟ್ರೀಯ ಭಾವೈಕ್ಯತೆಗೆ ಪ್ರತಿಕೂಲ ಹೇಳಿಕೆ) ಕಲಂಗಳಡಿ ಸ್ಪಷ್ಟ ಸಾಕ್ಷಾಧಾರವಿದೆ ಎಂದು ಜೀಲಾನಿ ಪ್ರತಿಪಾದಿಸಿದ್ದಾರೆ. ಈ ಪ್ರಕರಣದಲ್ಲಿ ನೊಂದವರು ಮತ್ತು ಸಾಕ್ಷಿಗಳಿಗೆ ಮೇಲ್ಮನವಿ ಸಲ್ಲಿಸುವ ಹಕ್ಕು ಇದೆ. ಈ ಪ್ರಕರಣದಲ್ಲಿ ನಾವು ನೊಂದವರು, ನಮ್ಮ ಹಲವು ಜನರು ಸಾಕ್ಷಿಗಳು. ನಾನು ಕೂಡಾ ಅವರಲ್ಲಿ ಒಬ್ಬನಾಗಿದ್ದೇನೆ . ಎಐಎಂಪಿಎಲ್‌ಬಿಯೂ ಮೇಲ್ಮನವಿ ಸಲ್ಲಿಸುವ ಕಕ್ಷಿದಾರ ಪಕ್ಷವಾಗಿರಬಹುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News