ಬಾಬರಿ ಮಸೀದಿ ಧ್ವಂಸ: ನ್ಯಾಯ ವ್ಯವಸ್ಥೆಗೆ ಅನ್ಯಾಯ

Update: 2020-10-01 04:41 GMT

ನಿರೀಕ್ಷೆಯಂತೆಯೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದೆ. ಯಾವಾಗ ರಾಮಮಂದಿರ ನಿರ್ಮಾಣಕ್ಕೆ ಪರವಾಗಿ ತೀರ್ಪು ಹೊರಬಿದ್ದಿತ್ತೋ, ಆಗಲೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಗತಿಯೇನು ಎನ್ನುವುದರ ಸೂಚನೆ ಸಿಕ್ಕಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಕ್ರಿಮಿನಲ್ ಅಪರಾಧ ಎಂದು ಬಹಿರಂಗವಾಗಿಯೇ ಹೇಳಿದ್ದ ಸುಪ್ರೀಂಕೋರ್ಟ್, ಅದೇ ಸಂದರ್ಭದಲ್ಲಿ, ಆ ಕ್ರಿಮಿನಲ್ ಅಪರಾಧ ನಡೆದ ಸ್ಥಳದಲ್ಲಿ ‘ರಾಮಮಂದಿರ ನಿರ್ಮಾಣ’ಕ್ಕೆ ಅನುಮತಿ ನೀಡಿತ್ತು. ರಾಮಮಂದಿರ ತೀರ್ಪಿನಲ್ಲೇ ಹತ್ತು ಹಲವು ವಿರೋಧಾಭಾಸಗಳನ್ನು ಸಂವಿಧಾನ ತಜ್ಞರು ಆಗಲೇ ಎತ್ತಿ ತೋರಿಸಿದ್ದರು. ಮಹಾ ಅಪರಾಧವೆಂದು ಸುಪ್ರೀಂಕೋರ್ಟ್ ಬಣ್ಣಿಸಿರುವ ‘ಬಾಬರಿ ಮಸೀದಿ ಧ್ವಂಸ’ ನಡೆಯದೇ ಇದ್ದಿದ್ದರೆ, ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಎಂದು ಸುಪ್ರೀಂಕೋರ್ಟಿಗೆ ಹೇಳಲು ಸಾಧ್ಯವೇ ಇರಲಿಲ್ಲ.

ಒಂದು ವೇಳೆ ಬಾಬರಿ ಮಸೀದಿ ಧ್ವಂಸ ನಡೆಯದೇ ಇದ್ದಿದ್ದರೆ, ಮೊತ್ತ ಮೊದಲು ಅದನ್ನು ಧ್ವಂಸ ಮಾಡುವುದಕ್ಕೆ ನ್ಯಾಯ ವ್ಯವಸ್ಥೆ ಆದೇಶ ನೀಡಬೇಕಾಗಿತ್ತು. ಆ ಬಳಿಕವೇ ಅಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಿತ್ತು. ಸಂವಿಧಾನಕ್ಕೆ ವಂಚಿಸಿ ಬಾಬರಿ ಮಸೀದಿ ಧ್ವಂಸ ನಡೆದಿರುವುದು ರಾಮಮಂದಿರ ನಿರ್ಮಾಣ ಪ್ರಕ್ರಿಯೆಯ ಪ್ರಮುಖ ಭಾಗವಾಗಿತ್ತು ಮತ್ತು ಅಕ್ರಮ ನಡೆದ ಜಾಗದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿರುವುದರಿಂದ, ಧ್ವಂಸವನ್ನು ನ್ಯಾಯಾಲಯವೇ ಪರೋಕ್ಷವಾಗಿ ಅನುಮೋದಿಸಿದಂತಾಗಿತ್ತು. ಈ ಮೂಲಕ ಧ್ವಂಸ ಪ್ರಕರಣದ ಆರೋಪಿಗಳ ವಿಚಾರಣೆ ಏಕಾಏಕಿ ತನ್ನ ಮಹತ್ವವನ್ನು ಕಳೆದುಕೊಂಡಿತು. ಇಂದಿನ ಸಿಬಿಐ ವಿಶೇಷ ನ್ಯಾಯಾಲಯ ತಾನು ನೀಡಿದ ತೀರ್ಪು ನ್ಯಾಯ ವ್ಯವಸ್ಥೆಯ ಒಂದು ಅಣಕವಷ್ಟೇ.

ಒಂದ ಅಂಶವನ್ನು ಗಮನಿಸಬೇಕು. ಡಿಸೆಂಬರ್ 6ರಂದು ನಡೆದಿರುವುದು ಒಂದು ಮಸೀದಿಯ ಧ್ವಂಸವಲ್ಲ. ದುಷ್ಕರ್ಮಿಗಳು ದೇಶದ ನ್ಯಾಯವ್ಯವಸ್ಥೆಯನ್ನೇ ಧ್ವಂಸಗೊಳಿಸಿದ್ದರು. ಅಂದು ಆ ಸ್ಥಳದಲ್ಲಿ ಯಾವುದೇ ಅತಿರೇಕಗಳು ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಘಟಕರಿಂದ ನ್ಯಾಯಾಲಯ ಮಾತು ಪಡೆದ ಬಳಿಕವೇ ಅವರಿಗೆ ಅಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತ್ತು. ಆದರೆ ಸಂಘಟನೆಗಳು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಬಾಬರಿ ಮಸೀದಿ ಧ್ವಂಸದ ಹೆಸರಲ್ಲಿ ನಮ್ಮ ನ್ಯಾಯವ್ಯವಸ್ಥೆಗೆ, ಸಂವಿಧಾನಕ್ಕೆ ಗುಣ ಪಡಿಸಲಾಗದಂತಹ ಆಳವಾದ ಗಾಯವನ್ನು ದುಷ್ಕರ್ಮಿಗಳು ಮಾಡಿದ್ದರು. ಆದುದರಿಂದ, ಅಂದು ಬಾಬರಿ ಮಸೀದಿ ಸ್ಥಳದಲ್ಲಿ ಕಾರ್ಯಕ್ರಮ ಸಂಘಟಿಸಿದ್ದ ಎಲ್ಲ ಮುಖಂಡರು ಬಾಬರಿ ಮಸೀದಿ ಧ್ವಂಸದ ನೇರ ಆರೋಪಿಗಳು. ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು, ನ್ಯಾಯ ವ್ಯವಸ್ಥೆ ತನಗೆ ತಾನೇ ನ್ಯಾಯವನ್ನು ನೀಡಬೇಕಿತ್ತು. ತನಗಾದ ಅನ್ಯಾಯವನ್ನೇ ಸರಿಪಡಿಸಲು ಸಾಧ್ಯವಾಗದ ಮೇಲೆ, ಈ ದೇಶದ ಇತರ ಸಂತ್ರಸ್ತರಿಗೆ ನಮ್ಮ ನ್ಯಾಯವ್ಯವಸ್ಥೆ ಅದು ಹೇಗೆ ನ್ಯಾಯವನ್ನು ನೀಡೀತು? ಎನ್ನುವ ಪ್ರಶ್ನೆ ಇದೀಗ ಬಾಬರೀ ಮಸೀದಿ ಧ್ವಂಸ ಪ್ರಕರಣದ ತೀರ್ಪಿನಿಂದಾಗಿ ಜನರು ತಮಗೆ ತಾವೇ ಪ್ರಶ್ನಿಸಿಕೊಳ್ಳುವಂತಾಗಿದೆ. ಈಗಲೂ ನ್ಯಾಯವ್ಯವಸ್ಥೆ ಅಲ್ಲಿ ಅಪರಾಧ ನಡೆದಿಲ್ಲ ಎಂದು ಹೇಳಿಲ್ಲ. ಆ ಅಪರಾಧಗಳನ್ನು ಯಾರು ಎಸಗಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷಗಳಿಲ್ಲ ಎಂದು ಹೇಳುತ್ತಿದೆ.

ಅಂದು ನಡೆದಿರುವುದು ಪೂರ್ವನಿಯೋಜಿತವಲ್ಲ ಎಂದು ಹೇಳುವ ಮೂಲಕ, ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಮತ್ತೆ ಜನರ ಭಾವನೆಗಳನ್ನು ನ್ಯಾಯಾಲಯ ನೆಚ್ಚಿಕೊಂಡಿದೆ. ಆರೋಪಿಗಳ ವಿರುದ್ಧ ಇರುವ ಪುರಾವೆಗಳು ಸಾಕಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಸಿಬಿಐ ಒದಗಿಸಿದ ಆಡಿಯೊ, ವೀಡಿಯೊದಿಂದ ನಿಜವನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ‘ಮಾತುಗಳ ಧ್ವನಿ ಸ್ಪಷ್ಟವಾಗಿಲ್ಲ’ ಎಂದಿದೆ. ‘ಸಮಾಜ ವಿರೋಧಿ ಶಕ್ತಿಗಳು ಮಸೀದಿಯನ್ನು ಧ್ವಂಸಗೊಳಿಸಿವೆ. ಆರೋಪಿ ಮುಖಂಡರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಗಳಿಗೆ ಪರೋಕ್ಷವಾಗಿ ‘ಬಾಬರೀ ಮಸೀದಿ ರಕ್ಷಕರು’ ಎಂಬ ಬಿರುದನ್ನೂ ದಯಪಾಲಿಸಿದೆ. ಬಾಬರಿ ಮಸೀದಿಯನ್ನು ನೇರವಾಗಿ ಅಡ್ವಾಣಿ, ಉಮಾಭಾರತಿ, ಜೋಶಿಯಾದಿಯಾಗಿ ಗುದ್ದಲಿ, ಪಿಕ್ಕಾಸುಗಳ ಜೊತೆಗೆ ಒಡೆದು ಹಾಕಿದರು ಎಂದು ಯಾರೂ ಹೇಳಿಲ್ಲ. ಅಷ್ಟೊಂದು ಜನರು ಅಲ್ಲಿ ನೆರೆಯುವುದಕ್ಕೆ, ಅವರು ಆ ವಿವಾದಿತ ಕಟ್ಟಡವನ್ನು ಧ್ವಂಸಗೊಳಿಸುವುದಕ್ಕೆ ಅಡ್ವಾಣಿಯಾದಿಗಳು ಮಾಡಿದ ರಥಯಾತ್ರೆ ಮತ್ತು ಆ ಬಳಿಕದ ರಾಜಕೀಯ ಕಾರ್ಯಕ್ರಮಗಳು ಕಾರಣ ಎನ್ನುವುದು ನ್ಯಾಯಾಲಯಕ್ಕೆ ಮನವರಿಕೆಯಾಗದೇ ಇರುವುದರಿಂದ ಆರೋಪಿಗಳು ಬಿಡುಗಡೆಗೊಂಡಿದ್ದಾರೆ. ಹಾಗಾದರೆ, ರಥಯಾತ್ರೆಯ ಮೂಲಕ ಅಡ್ವಾಣಿಯವರು ಜನರ ನಡುವೆ ಏನನ್ನು ಬಿತ್ತುತ್ತಾ ಹೋದರು? ರಥಯಾತ್ರೆಯ ಸಂದರ್ಭದಲ್ಲಿ ದೇಶಾದ್ಯಂತ ಹರಿದ ರಕ್ತಪಾತಕ್ಕೆ ಕಾರಣವೇನು? ರಥಯಾತ್ರೆಯ ಮೂಲಕ ಅಡ್ವಾಣಿಯವರು ‘ಬಾಬರಿ ಮಸೀದಿ ಧ್ವಂಸ’ವನ್ನು ತಡೆಯಲು ಗರಿಷ್ಠ ಪ್ರಯತ್ನ ನಡೆಸಿದರು ಎಂದು ನ್ಯಾಯಾಲಯ ಹೇಳುತ್ತಿದೆಯೇ?

‘ಮಾತುಗಳ ಧ್ವನಿ ಸ್ಪಷ್ಟವಾಗಿಲ್ಲ’ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು, ಧ್ವನಿ ಮುದ್ರಣಗೊಂಡ ಆಡಿಯೊ, ವೀಡಿಯೊಗಳ ತಾಂತ್ರಿಕ ಸಮಸ್ಯೆ. ಇನ್ನೊಂದು ನ್ಯಾಯಾಲಯದ ಕಿವಿಯ ಆಲಿಸುವ ಸಾಮರ್ಥ್ಯದ ಸಮಸ್ಯೆ. ‘ಧ್ವನಿ ಸ್ಪಷ್ಟವಾಗದೇ ಇರುವುದಕ್ಕೆ’ ಇವುಗಳಲ್ಲಿ ಯಾವುದು ಕಾರಣ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಾಬರಿ ಮಸೀದಿಯ ಧ್ವಂಸಕ್ಕೆ ತಮ್ಮ ಮಾತುಗಳ ಮೂಲಕ ಯಾರು ಪ್ರೇರಣೆ ನೀಡಿದ್ದರೋ ಅವರು ಮಾತನಾಡಿರುವ ಧ್ವನಿ ಮುದ್ರಿಕೆಗಳನ್ನು ಕೇಳಿಯೇ ಅಷ್ಟೂ ಜನರು ಅಲ್ಲಿ ನೆರೆದರು. ಬಾಬರಿ ಮಸೀದಿ ಧ್ವಂಸಗೈದವರನ್ನು ದುಷ್ಕರ್ಮಿಗಳು ಎಂದು ವಿಶೇಷ ನ್ಯಾಯಾಲಯ ಕರೆದಿದೆ. ಆದರೆ ಆ ದುಷ್ಕರ್ಮಿಗಳನ್ನು ಬಾಬರಿ ಮಸೀದಿಯ ಅವರಣದಲ್ಲಿ ಸೇರಿಸಿದವರು ಯಾರು? ಎನ್ನುವುದರ ಕುರಿತಂತೆ ಮಾತ್ರ ಅಮಾಯಕವಾಗಿದೆ.ಭಕ್ತರ ಮಧ್ಯದಲ್ಲಿ ಸೇರಿದ ದುಷ್ಕರ್ಮಿಗಳು ಬಾಬರಿ ಮಸೀದಿಯನ್ನು ಯಾಕೆ ಧಂಸಗೊಳಿಸಿದರು? ಹೇಗೆ ಧ್ವಂಸಗೊಳಿಸಿದರು? ಬರೇ ಕೈಗಳಿಂದ ಒಡೆದು ಹಾಕಿದರೇ? ಅಥವಾ ಕಾಲಿನಿಂದ ತುಳಿದು ಗೋಡೆಗಳನ್ನು ಬೀಳಿಸಿರಬಹುದೇ? ಮಸೀದಿ ಧ್ವಂಸದಲ್ಲಿ ಬೃಹತ್ ಬುಲ್ಡೋಜರ್‌ಗಳು ಕೆಲಸ ಮಾಡಿದ್ದವು ಎನ್ನುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಮಾರಕ ಹತ್ಯಾರಗಳಿಲ್ಲದೆ ಆ ಬೃಹತ್ ಕಟ್ಟಡವನ್ನು ಒಡೆಯಲು ಸಾಧ್ಯವಿಲ್ಲ.

ಪೂರ್ವನಿಯೋಜಿತ ಅಲ್ಲದೇ ಇದ್ದರೆ ಆ ಹತ್ಯಾರಗಳು ಅಲ್ಲಿಗೆ ಹೇಗೆ ಬಂದವು? ಬರೇ ಐದು ಗಂಟೆಗಳಲ್ಲಿ ಬಾಬರೀ ಮಸೀದಿ ಧ್ವಂಸವಾಗಿರಬೇಕಾದರೆ, ಅದಕ್ಕಾಗಿ ಮೊದಲೇ ತಯಾರಿ ನಡೆದಿತ್ತು ಎನ್ನುವುದನ್ನು ಅಂದಿನ ಗೃಹಸಚಿವಾಲಯದ ಉನ್ನತ ಅಧಿಕಾರಿ ಹೇಳಿದ್ದರು. ಅವರ ಧ್ವನಿಯೂ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಕೇಳಿಸಿಲ್ಲ. ಇಷ್ಟಕ್ಕೂ ಬಾಬರಿ ಮಸೀದಿ ಧ್ವಂಸ ನಡೆಯಲು ಅಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಭಾಷಣವಷ್ಟೇ ಪ್ರೇರಣೆಯಲ್ಲ. ಒಂದು ದಶಕದಿಂದ ನಿರಂತರವಾಗಿ ಅಡ್ವಾಣಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದಿವೆ. ವಿಚ್ಛಿದ್ರಕಾರಿ ಶಕ್ತಿಗಳು ನಿರಂತರವಾಗಿ ದೇಶದ ವಿರುದ್ಧ, ಸಂವಿಧಾನದ ವಿರುದ್ಧ ನಡೆಸಿದ ಸಂಚಿನ ಫಲವಾಗಿ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ನಡೆಯಿತು.

ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಬಾಬರಿ ಮಸೀದಿ ಸ್ಮಾರಕದ ವಿರುದ್ಧ ದ್ವೇಷ ಹರಡಿದ, ಡಿಸೆಂಬರ್ 6ರಂದು ಸ್ಥಳದಲ್ಲಿ ಉಪಸ್ಥಿತರಿದ್ದ ನಾಯಕರೆಲ್ಲ ಅಪರಾಧಿಗಳೇ. ಸಿಬಿಐ ವಿಶೇಷ ನ್ಯಾಯಾಲಯದ ಪಾಲಿಗೆ ಕಿವಿ ಮಾತ್ರವಲ್ಲ, ಕಣ್ಣಿನ ಸಮಸ್ಯೆಯೂ ಇದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈಗಾಗಲೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ಮುಂದಿನ ದಿಗಳಲ್ಲಿ ಮೇಲ್ಮನವಿ ಸಲ್ಲಿಸುವ ಜನರು ‘ಅಲ್ಲಿ ಬಾಬರಿ ಮಸೀದಿಯೆನ್ನುವುದು ಅಸ್ತಿತ್ವದಲ್ಲಿ ಇತ್ತೇ?’ ಎನ್ನುವುದನ್ನು ಸಾಬೀತು ಪಡಿಸುವ ಅಗತ್ಯ ಬರಬಹುದು. ಅದನ್ನು ಸಾಬೀತು ಮಾಡುವಲ್ಲಿ ಯಶಸ್ವಿಯಾದರೂ ನ್ಯಾಯ ಸಿಗುವುದು ಅಷ್ಟರಲ್ಲೇ ಇದೆ. ಯಾಕೆಂದರೆ, ಅವರು ಆ ಬಳಿಕ ಈ ದೇಶದಲ್ಲಿ ಸಂವಿಧಾನವೆನ್ನುವುದು ಒಂದು ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಸಾಬೀತು ಮಾಡಬೇಕಾದ ಅನಿವಾರ್ಯತೆ ಬರಬಹುದು. ಒಟ್ಟಿನಲ್ಲಿ, ಈ ದೇಶದ ಸಂವಿಧಾನ ಎರಡು ಬಾರಿ ಧ್ವಂಸವಾಯಿತು. ಒಮ್ಮೆ ದುಷ್ಕರ್ಮಿಗಳ ಕೈಯಲ್ಲಿ. ಇನ್ನೊಮ್ಮೆ ಸ್ವತಃ ನ್ಯಾಯವ್ಯವಸ್ಥೆಯ ಕೈಯಲ್ಲಿ. ಇದನ್ನು ಬೇಕಾದರೆ ಸ್ವಯಂ ಇರಿದು ನಿಧನ ಎಂದೂ ಕರೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News