ತರಾತುರಿಯಲ್ಲಿ ಶಾಲೆಗಳನ್ನು ಪುನಾರಂಭಿಸುವುದಿಲ್ಲ: ಸಚಿವ ಸುರೇಶ್ ಕುಮಾರ್

Update: 2020-10-01 10:57 GMT

ಬೆಂಗಳೂರು, ಅ. 1: ಕೇಂದ್ರ ಸರಕಾರ ಅನುಮತಿ ನೀಡಿದರೂ ತರಾತುರಿಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವುದಿಲ್ಲ. ಶಿಕ್ಷಣ ತಜ್ಞರು ಹಾಗೂ ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮ ಧ್ಯೇಯ. ಶಾಲೆಯ ಪ್ರಾರಂಭದ ವಿಚಾರವಾಗಿ ಪೋಷಕರಿಗೆ ಇರುವ ಭಯ ಮತ್ತು ಆತಂಕವನ್ನು ನಿವಾರಣೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನಾನು ರಾಜ್ಯದ ಮಕ್ಕಳ ಪೋಷಕ, ನನಗೂ ಆ ಜವಾಬ್ದಾರಿ ಇದೆ. ಪೋಷಕರ ಕಾಳಜಿ ಮತ್ತು ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿಯೂ ಶಾಲೆ-ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಾಗಿದೆ. ಕೊರೋನ ವೈರಸ್ ಸೋಂಕು ಒಂದೆರಡು ತಿಂಗಳಲ್ಲಿ ಹೋಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ಸೋಂಕಿಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಹೀಗಾಗಿ ಸೋಂಕಿನ ಜೊತೆಗೆ ಬದುಕಬೇಕಿದೆ. ಆದುದರಿಂದ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಈಗಾಗಲೇ ಚಂದನವಾಹಿನಿಯಲ್ಲಿ 8, 9 ಮತ್ತು 10ನೆ ತರಗತಿಗೆ ಪಾಠ ಮಾಡುತ್ತಿದ್ದೇವೆ. ಕೆಲ ಶಾಲೆಗಳು ಆನ್‍ಲೈನ್ ಮೂಲಕ ಪಾಠ ಮಾಡುತ್ತಿವೆ. 1 ರಿಂದ 7ನೆ ತರಗತಿ ಮಕ್ಕಳಿಗಾಗಿ ಖಾಸಗಿ ವಾಹಿನಿಗಳಲ್ಲಿ ಪಾಠ ಆರಂಭಿಸಲು ತೀರ್ಮಾನಿಸಿದ್ದೇವೆ. ಈ ಪ್ರಕ್ರಿಯೆ ನಡೆಯುತ್ತಿದೆ. ಅರ್ಧ ವರ್ಷ ಈಗಾಗಲೇ ಕಳೆದಿದೆ. ಶಾಲೆ ಪ್ರಾರಂಭ ಮಾಡಿದರೆ ಸಿಗುವ ಶೈಕ್ಷಣಿಕ ಅವಧಿಯಲ್ಲಿ ಪಠ್ಯ ಕಡಿತ, ಶನಿವಾರ ತರಗತಿ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.

ಶಾಲೆ-ಕಾಲೇಜು ಆರಂಭಕ್ಕೆ ಕೇಂದ್ರ ಸರಕಾರ ಅನುಮತಿ ಕೊಟ್ಟಿದ್ದರೂ ನಾವು ಸದ್ಯಕ್ಕೆ ಶಾಲಾ-ಕಾಲೇಜು ಪ್ರಾರಂಭ ಮಾಡುವುದಿಲ್ಲ. ತಕ್ಷಣವೇ ಶಾಲೆ ಪ್ರಾರಂಭ ಮಾಡುವ ಧಾವಂತ ನಮಗೆ ಇಲ್ಲ. ಪೋಷಕರು, ತಜ್ಞರು, ಶಿಕ್ಷಕರು ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಅ.15ರ ನಂತರ ರಾಜ್ಯದಲ್ಲಿ ಶಾಲೆ-ಕಾಲೇಜು ಆರಂಭಕ್ಕೆ ತೀರ್ಮಾನ ಕೈಗೊಳ್ಳುವಂತೆ ಕೇಂದ್ರ ಸರಕಾರ ಸೂಚಿಸಿದೆ. ಆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಪ್ರಾರಂಭಕ್ಕೆ ಮೊದಲು ಎಲ್ಲರೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಮಕ್ಕಳ ಸುರಕ್ಷತೆಗೆ ಮುಖ್ಯ. ಹೀಗಾಗಿ ಪೋಷಕರು ಯಾವುದೇ ರೀತಿಯಲ್ಲಿಯೂ ಆತಂಕಪಡುವುದು ಬೇಡ. ಯಾವುದೇ ಆತುರದಲ್ಲಿ ಶಾಲೆ ಪ್ರಾರಂಭ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News