"ನಿರ್ದಯಿ ಸರಕಾರ ಆಕೆಯನ್ನು ಕೊಂದು ಬಿಟ್ಟಿತು": ಹಾಥರಸ್ ಘಟನೆ ಕುರಿತು ಸೋನಿಯಾ ಗಾಂಧಿ

Update: 2020-10-01 09:33 GMT

ಹೊಸದಿಲ್ಲಿ: ಹಾಥರಸ್ನ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತಂತೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವತಿಯನ್ನು 'ನಿರ್ದಯಿ ಸರಕಾರ ಕೊಂದಿದೆ' ಹಾಗೂ ಈಗ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

"ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನವೊಂದು ನಡೆದಿತ್ತು,'' ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ ಸೋನಿಯಾ ಹೇಳಿದ್ದಾರೆ. "ಆ ಹುಡುಗಿಗೆ ಸೂಕ್ತ ಚಿಕಿತ್ಸೆ ಲಭಿಸಿರಲಿಲ್ಲ ಹಾಗೂ ಒಬ್ಬ ಪುತ್ರಿ ಈಗ ನಮ್ಮ ಜತೆಗಿಲ್ಲ. ಹಾಥರಸ್ನ ನಿರ್ಭಯಾ ಸಾಯಲಿಲ್ಲ, ಬದಲಾಗಿ ಆಕೆಯನ್ನು ನಿರ್ದಯಿ ಸರಕಾರ, ಅದರ ಆಡಳಿತ  ಹಾಗೂ ಉತ್ತರ ಪ್ರದೇಶ ಸರಕಾರದ ಅಜ್ಞಾನದಿಂದ ಸಾಯಿಸಲಾಯಿತು,'' ಎಂದು ಸೋನಿಯಾ ಹೇಳಿದ್ದಾರೆ.

"ಆಕೆ ಜೀವಂತವಾಗಿರುವಾಗ ಆಕೆಯ ಕೂಗು ಯಾರಿಗೂ ಕೇಳಲಿಲ್ಲ, ಆಕೆಗೆ ರಕ್ಷಣೆ ದೊರೆಯಲಿಲ್ಲ ಆದರೆ ಆಕೆಯ ಸಾವಿನ ನಂತರ ಆಕೆಯನ್ನು ಆಕೆಯ ಕುಟುಂಬಕ್ಕೂ ಹಸ್ತಾಂತರಿಸಲಾಗಿಲ್ಲ, ಅಳುತ್ತಿದ್ದ ಆಕೆಯ ತಾಯಿಗೆ ತನ್ನ ಪುತ್ರಿಗೆ ವಿದಾಯ ಹೇಳುವ ಅವಕಾಶವನ್ನೂ ನೀಡಲಾಗಿಲ್ಲ, ಇದು ದೊಡ್ಡ ಅಪರಾಧ,'' ಎಂದು ಸೋನಿಯಾ ಹೇಳಿದ್ದಾರೆ.

ಆದಿತ್ಯನಾಥ್ ಸರಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ವಿರುದ್ಧ ದೇಶ ದನಿಯೆತ್ತಬೇಕು. ಇದು ಯಾವ ವಿಧದ ನ್ಯಾಯ, ಇದು ಯಾವ ವಿಧದ ಸರಕಾರ ನೀವು ಏನು ಬೇಕಾದರೂ ಮಾಡಬಹುದು ಹಾಗೂ ದೇಶ ಅದನ್ನು ನೋಡಿಕೊಂಡು ಸುಮ್ಮನಿರುತ್ತದೆ ಎಂದುಕೊಂಡಿದ್ದೀರಾ? ಇಲ್ಲ, ದೇಶ ನಿಮ್ಮ ಅನ್ಯಾಯದ ವಿರುದ್ಧ ದನಿಯೆತ್ತಲಿದೆ,'' ಎಂದು ಸೋನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News