ಕೊರೋನ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ನೀಡದ 4 ಆಸ್ಪತ್ರೆಗಳ ವಿರುದ್ಧ ದೂರು ದಾಖಲು

Update: 2020-10-01 10:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.1: ಕೊರೋನ ಸೋಂಕಿತರಿಗೆ ಚಿಕಿತ್ಸೆಗೆ ಸಹಕಾರ ನೀಡದ ಹಾಗೂ ಶೇ.50ರಷ್ಟು ಹಾಸಿಗೆ ನೀಡದ ನಗರದ ನಾಲ್ಕು ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ದೂರು ದಾಖಲಿಸಿದೆ.

ಸರಕಾರದ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ, ಕೆಂಗೇರಿ, ವರ್ತೂರು ಹಾಗೂ ಓಲ್ಡ್ ಏರ್ ಪೋರ್ಟ್ ರಸ್ತೆಯ ತಲಾ ಒಂದೊಂದು ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಲ್ಕು ಆಸ್ಪತ್ರೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸೆ.16 ರಂದು ಕೊರೋನ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡದ ಮತ್ತು ಸರಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡದ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‍ನಲ್ಲಿ ಮುಂದಿನ 48 ಗಂಟೆಗಳ ಒಳಗಾಗಿ ಸರಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು. 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.

ನೋಟಿಸ್‍ಗೆ ಉತ್ತರ ನೀಡದೆ ಹಾಗೂ ಸರಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡದೆ ಇದ್ದಲ್ಲಿ, ಆಸ್ಪತ್ರೆಗಳ ಪರವಾನಿಗೆಯನ್ನು ರದ್ದು ಮಾಡುವುದರ ಜತೆಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು.

ನೋಟಿಸ್ ನೀಡಿದ್ದು ಯಾಕೆ?

ಕೊರೋನ ಸೋಂಕಿತರ ಚಿಕಿತ್ಸೆಗೆ ಆನ್‍ಲೈನ್ ಪೋರ್ಟ್‍ನಲ್ಲಿ ಹಾಸಿಗೆ ಬ್ಲಾಕ್ ಮಾಡಿದರೂ, ದಾಖಲಿಸುವ ವೇಳೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗುತ್ತಿತ್ತು. ಅಲ್ಲದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟಲ್‍ನಲ್ಲಿ ವಿವರವಾದ ಮಾಹಿತಿ ನೀಡಿಲ್ಲ ಎಂದು ನೋಟಿಸ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News