ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ರಾಮಬಾಣ: ಡಿಸಿಎಂ ಅಶ್ವತ್ಥ ನಾರಾಯಣ

Update: 2020-10-01 11:51 GMT

ಬೆಂಗಳೂರು, ಅ.1: ಕೋವಿಡ್ ಸೋಂಕು ತಡೆಗಟ್ಟಲು ಮಾಸ್ಕ್ ರಾಮಬಾಣ. ಮಾರಕ ವೈರಸ್‍ಗೆ ಮಾಸ್ಕ್ ಅತ್ಯುತ್ತಮ ಅಸ್ತ್ರವಾಗಿದೆ. ವೈಜ್ಞಾನಿಕವಾಗಿಯೂ ಈ ಅಂಶ ಸಾಬೀತಾಗಿದ್ದು, ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಮಾಸ್ಕ್ ಅನ್ನು ತಪ್ಪದೇ ಹಾಗೂ ಶುಚಿ ಮಾಡಿಕೊಂಡು ಬಳಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಕೋವಿಡ್ ಸೋಂಕಿಗೆ ತುತ್ತಾಗಿ ಹಲವಾರು ದಿನ ಮನೆಯಲ್ಲೆ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದಿದ್ದ ಅವರು ಗುರುವಾರ ಸಂಪುಟ ಸಭೆಗೆ ಹಾಜರಾಗಿದ್ದರಲ್ಲದೆ, ಈ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದರು.

ವೈರಸ್ ಮತ್ತಷ್ಟು ಹರಡಲು ಬಿಡಬಾರದು. ಇದರಲ್ಲಿ ಪ್ರತಿಯೊಬ್ಬರ ಕರ್ತವ್ಯವೂ ಇದೆ. ಮಾಸ್ಕ್ ತೆಗೆದು ಮಾತನಾಡುವಂಥ ಕೆಲಸವನ್ನು ಯಾರು ಮಾಡಬಾರದು. ದಂಡ ವಿಧಿಸಲು ಸರಕಾರಕ್ಕೆ ಇಷ್ಟವಿಲ್ಲ. ಆದರೆ, ಜನರು ಈ ಬಗ್ಗೆ ಮೂಡಿಸಲಾಗಿರುವ ಜಾಗೃತಿಯ ಬಗ್ಗೆ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು.

ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ಸರಕಾರ ನಿರ್ಧರಿಸಿದೆ. ಆದರೆ, ಆ ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ಜನರು ದೂರುತ್ತಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ದಂಡ ಜಾಸ್ತಿ, ಕಡಿಮೆ ಎನ್ನುವುದಕ್ಕಿಂತ ಜನರ ಆರೋಗ್ಯವೆ ಮುಖ್ಯ. ಕೋವಿಡ್ ಪೀಡೆ ಕೆಲದಿನ ಇದ್ದು ಹೋಗಿಬಿಡುತ್ತೆ ಎನ್ನುವ ನಂಬಿಕೆ ಇತ್ತು. ಅದು ಬಹಳ ಕಾಲ ಮುಂದುವರಿದಿದೆ. ಹೀಗಾಗಿ ಜನರ ಆರೋಗ್ಯವನ್ನು ರಕ್ಷಣೆ ಮಾಡುವುದು ಸರಕಾರದ ಕರ್ತವ್ಯ ಹಾಗೂ ಜನರು ಮಾಸ್ಕ್ ಅನ್ನು ತಪ್ಪದೇ ಧರಿಸಬೇಕು ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಜನರು ವೈರಸ್ ಜತೆಯೆ ಜೀವನ ನಡೆಸಬೇಕು. ಹೀಗಾಗಿ ಹೊರಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ, ಜತೆಗೆ ವೈರಸ್ ಇನ್ನು ವ್ಯಾಪಕವಾಗಿ ಹರಡುತ್ತದೆ. ಆದರೂ ಜನರು ಮಾಸ್ಕ್ ಧರಿಸದೆ ಮುಕ್ತವಾಗಿ ಓಡಾಟ ನಡೆಸುತ್ತಿರುವುದು ಸರಿಯಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಇತರರ ಆರೋಗ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಂಡವನ್ನು ವಿಧಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನಾನು ಸೋಂಕಿತನಾಗಿದ್ದೆ: ಕೋವಿಡ್ ಹಗುರವಾಗಿ ತೆಗೆದುಕೊಳ್ಳುವ ಕಾಯಿಲೆ ಅಲ್ಲ. ಅದು ಖಂಡಿತಾ ಮಾರಕ ವೈರಸ್. ಸ್ವತಃ ನಾನೇ ಸೋಂಕಿತನಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹೊರಗೆ ಬಂದಿದ್ದೇನೆ. ಸೋಂಕು ತಗುಲುವ ಮುನ್ನ, ಗುಣಮುಖನಾದ ನಂತರ ಹೇಗೆ ಆರೋಗ್ಯ ಇರುತ್ತದೆ ಎಂಬ ಅನುಭವ ಸ್ವತಃ ನನಗೆ ಆಗಿದೆ. ಕ್ವಾರಂಟೈನ್ ಆಗಿ ನಾನು ಎದುರಿಸಿದ ಕಷ್ಟದ ಪರಿಸ್ಥಿತಿಯನ್ನು ಬೇರಾರೂ ಎದುರಿಸುವುದು ಬೇಡ. ಎಲ್ಲರೂ ಸುರಕ್ಷಿತವಾಗಿರಬೇಕು ಎಂಬುದು ನನ್ನ ಕಾಳಜಿ ಎಂದು ಅಶ್ವತ್ಥನಾರಾಯಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News