ಲಸಿಕೆ ಬರುವವರೆಗೆ ‘ನಮ್ಮ ಲಸಿಕೆ ಫೇಸ್ ಮಾಸ್ಕ್’: ಡಾ.ಸುದರ್ಶನ್

Update: 2020-10-01 11:52 GMT

ಬೆಂಗಳೂರು, ಅ.1: ಕೋವಿಡ್-19 ಸೋಂಕಿಗೆ ಲಸಿಕೆ ಬರುವವರೆಗೆ ನಮ್ಮ ಲಸಿಕೆ ಫೇಸ್ ಮಾಸ್ಕ್ ಆಗಿದೆ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ತಿಳಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆಯ ಪಿಐಬಿ ಆಯೋಜಿಸಿದ್ದ “ಕೊರೋನ ಸೋಂಕು: ಮುನ್ನೆಚ್ಚರಿಕೆಯೆ ಚಿಕಿತ್ಸೆ” ವೆಬಿನಾರ್ ನಲ್ಲಿ ವಿಷಯ ತಜ್ಞರಾಗಿ ಪಾಲ್ಗೊಂಡು ‘ಸಮುದಾಯದಲ್ಲಿ ಸೋಂಕು : ಸಾರ್ವಜನಿಕ ಕ್ರಮಗಳು’ ಬಗ್ಗೆ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತ ಇರುವ ಪ್ರತಿಯೊಬ್ಬರನ್ನು ಲಕ್ಷಣ ರಹಿತರೆಂದು ಭಾವಿಸಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರಲೇಬೇಕು. ಸೋಂಕು ಇರುವ ವ್ಯಕ್ತಿಯೊಂದಿಗೆ ಒಂದು ಮೀಟರ್ ಗಿಂತ ಕಡಿಮೆ ಅಂತರ, 20 ನಿಮಿಷಕ್ಕಿಂತ ಹೆಚ್ಚು ಹೊತ್ತು ಹಾಗೂ ಅವರೊಂದಿಗೆ ಮಾತನಾಡುವಾಗ ಮುಖಗವಸು ಹಾಕಿಲ್ಲವೆಂದರೆ ಸೋಂಕು ತಗಲುವ ಸಾಧ್ಯತೆ ಅತಿ ಹೆಚ್ಚು ಎಂದು ಅವರು ಹೇಳಿದರು.

ಹಾಗಾಗಿ ಮೂರು ‘ಸಿ’ ಗಳಾದ ಕ್ರೌಡೆಡ್, ಕ್ಲೋಸಡ್, ಕ್ಲೋಸ್ ಕಾಂಟಾಕ್ಟ್ ಅನ್ನು ಅವಶ್ಯಕವಾಗಿ ತಡೆಯಬೇಕು. ಅಂದರೆ ಅತಿ ಹೆಚ್ಚು ಜನಸಂದಣಿಯಲ್ಲಿ ಇರಬಾರದು, 6 ಗಜ ಸುರಕ್ಷಿತ ಅಂತರದ ಪಾಲನೆ ಹಾಗೂ ಬಸ್ ಮುಂತಾದ ವಾಹನ, ಹೆಚ್ಚು ಜನರಿರುವ ಕೋಣೆ ಮೊದಲಾದವುಗಳಲ್ಲಿ ಸಾಧ್ಯವಾದಷ್ಟೂ ಇರಬೇಡಿ ಎಂದು ಸುದರ್ಶನ್ ತಿಳಿಸಿದರು.

ವೆಬಿನಾರ್ ನಲ್ಲಿ ‘ಸೋಂಕು ತಡೆಯುವ ಬಗೆ ಮತ್ತು ನಿರ್ವಹಣೆ’ ಕುರಿತು ಮಾತನಾಡಿದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಶ್ವಾಸಕೋಶ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ.ಶಶಿಭೂಷಣ್, ಕೊರೋನ ವೈರಾಣು ಸೋಂಕಿಗೆ ಸದ್ಯಕ್ಕೆ ಲಸಿಕೆ ಇಲ್ಲ, ಹಾಗಾಗಿ ಸುರಕ್ಷಿತ ಅಂತರದ ಪಾಲನೆ, ಮಾಸ್ಕ್ ಬಳಸುವಿಕೆ ಮತ್ತು ಸಾನಿಟೈಸರ್ ಅಥವಾ ಸೋಪು ದ್ರಾವಣದಲ್ಲಿ ಆಗಾಗ ಕೈತೊಳೆಯುವುದು ಅತ್ಯಂತ ಅವಶ್ಯಕ ಎಂದರು.

ನಾವು ಕೆಮ್ಮಿದಾಗ, ಸೀನಿದಾಗ ವೈರಾಣು ಗಾಳಿಯಲ್ಲಿ ಸೇರಿ ನೆಲದ ಮೇಲೆ ಬೀಳುವುದು, ನಾವಿರುವ ಸ್ಥಳದಲ್ಲಿ ಪುಸ್ತಕ, ಪೆನ್ನು ಅಥವಾ ಇನ್ನಾವುದೇ ವಸ್ತುವಿನ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಎಲ್ಲೆಂದರಲ್ಲಿ ಮುಟ್ಟಿರುವ ಸಾಧ್ಯತೆ ಕಾರಣ ಆಗಾಗ ಕೈ ತೊಳೆಯುವುದು ಮುಖ್ಯ. ಹಾಗೆಯೇ ಮುಖಗವಸನ್ನು ಸರಿಯಾದ ರೀತಿಯಲ್ಲಿ ತೆಗೆಯುವುದು, ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಸೋಪು ನೀರಿನಲ್ಲಿ ಕೈ ತೊಳೆಯುವುದು ಅತಿ ಅವಶ್ಯಕ ಎಂದು ಅವರು ಹೇಳಿದರು.

ಜನ ಇದರ ಬಗ್ಗೆ ಉಡಾಫೆ ಬಿಟ್ಟು ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅಷ್ಟೇ ಅಲ್ಲ ಎಲ್ಲೆಂದರಲ್ಲಿ ಉಗುಳುವುದು, ಸೀನಿದಾಗ ಟಿಶ್ಯು ಪೇಪರ್ ಬಳಸಿದರೆ ಅದನ್ನು ಮುಚ್ಚಿದ ಕಸದ ಡಬ್ಬದಲ್ಲಿಯೇ ಹಾಕಬೇಕು ಎಂದು ಅವರು ಕಿವಿಮಾತು ಹೇಳಿದರು.

ರಾಜ್ಯ ಸರಕಾರ ಕೈಗೊಡಿರುವ ಐದು ‘ಟಿ’ಗಳ ಅಂದರೆ ಟ್ರೇಸ್(ಸೋಂಕು ಪತ್ತೆ), ಟ್ರಾಕ್(ಸೋಂಕು ಹರಡಿದ್ದು ಹೇಗೆ?), ಟೆಸ್ಟ್(ಸೋಂಕು ಪತ್ತೆಗೆ ಪರೀಕ್ಷೆ), ಟ್ರೀಟ್(ಚಿಕಿತ್ಸೆ) ಮತ್ತು ಟೆಕ್ನಾಲಜಿ(ತಾಂತ್ರಿಕತೆ) ಬಗ್ಗೆ ಅವರು ವಿವರ ನೀಡಿದರು.

‘ಕೊರೋನ ವೈರಾಣು-ಸೋಂಕು ಹರಡುವಿಕೆ’ ಬಗ್ಗೆ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಸಹ ಪ್ರಧಾನ ತನಿಖಾಧಿಕಾರಿ ಡಾ.ಸತ್ಯನಾರಾಯಣ ಮಾತನಾಡಿ, ಕೊರೋನ ವೈರಾಣುವಿನ ರಚನೆ, ಅದರ ಸ್ವರೂಪ, ಹರಡುವ ರೀತಿ, ಸೋಂಕಿನ ಲಕ್ಷಣಗಳು ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಶಾಖೆಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News