ಅಸ್ಸಾಂ: ಮಾಟಗಾತಿಯೆಂದು ಆರೋಪಿಸಿ ಮಹಿಳೆಯ ಶಿರಚ್ಛೇದನಗೈದ ಗ್ರಾಮಸ್ಥರು

Update: 2020-10-02 16:20 GMT

ಗುವಾಹಟಿ,ಅ.2: ಅಸ್ಸಾಮಿನ ಕರ್ಬಿ ಆ್ಯಂಗ್ಲಾಂಗ್‌ನ ಡೋಕಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯ,ಆದಿವಾಸಿ ಸಮುದಾಯದ ಜನರೇ ಹೆಚ್ಚಾಗಿ ವಾಸವಾಗಿರುವ ಲಾಂಗಿನ್ ರಹಿಮಾಪುರ ಗ್ರಾಮದಲ್ಲಿ ಶಂಕಿತ ವಾಮಾಚಾರ ಪ್ರಕರಣದಲ್ಲಿ ಗ್ರಾಮಸ್ಥರು ಮಹಿಳೆಯೋರ್ವಳ ಶಿರಚ್ಛೇದನಗೈದಿದ್ದು,ಆಕೆಯ ರಕ್ಷಣೆಗೆ ಮುಂದಾಗಿದ್ದ ಶಾಲಾಶಿಕ್ಷಕನೋರ್ವನನ್ನೂ ಹತ್ಯೆಗೈದಿದ್ದಾರೆ.

ರಮಾವತಿ ಹಲುವಾ (50) ಎಂಬಾಕೆ ವಾಮಾಚಾರದ ಮೂಲಕ ಗ್ರಾಮದ ಇನ್ನೋರ್ವ ಮಹಿಳೆಯ ಸಾವಿಗೆ ಕಾರಣಳಾಗಿದ್ದಾಳೆಂದು ಆರೋಪಿಸಿ ಕೆಲವು ಕುಪಿತ ಗ್ರಾಮಸ್ಥರು ಬುಧವಾರ ರಾತ್ರಿ ಆಕೆಯ ಮನೆಗೆ ನುಗ್ಗಿ ದಾಳಿಗೆ ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ಶಿಕ್ಷಕ ಬಿಜೊಯ್ ಗೌರ್(28) ಅದನ್ನು ಪ್ರತಿಭಟಿಸಿದ್ದಲ್ಲದೆ,ಮೂಢನಂಬಿಕೆಗಳಿಗಾಗಿ ಗುಂಪನ್ನು ಟೀಕಿಸಿದ್ದರು. ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದ ಗುಂಪು ಬಳಿಕ ರುಂಡ-ಮುಂಡವನ್ನು ಬೇರ್ಪಡಿಸಿ ದುಷ್ಟಶಕ್ತಿಯ ನಿವಾರಣೆಗಾಗಿ ಪ್ರಾರ್ಥಿಸಿತ್ತು. ನಂತರ ಎರಡೂ ಶವಗಳನ್ನು ನದಿಯಾಚೆ ಎಳೆದೊಯ್ದು ಗುಡ್ಡವೊಂದರ ಸಮೀಪ ಸುಟ್ಟುಹಾಕಿತ್ತು.

 ರಮಾವತಿಯ ಹದಿಹರೆಯದ ಪುತ್ರಿಯನ್ನೂ ಕೊಲ್ಲಲು ಗ್ರಾಮಸ್ಥರು ಪ್ರಯತ್ನಿಸಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡ ಆಕೆ ಗುರುವಾರ ಬೆಳಿಗ್ಗೆ ಡೋಕಮೋಕಾ ಠಾಣೆಯನ್ನು ತಲುಪಿ ಹೇಳಿಕೆ ನೀಡಿದ್ದಳು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹತ್ಯೆಗಳಿಗೆ ಬಳಸಿದ್ದ ಆಯುಧಗಳು ಮತ್ತು ಮೃತರ ಶರೀರಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಒಂಭತ್ತು ಜನರನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎಲ್ಲ ಆರೋಪಿಗಳೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗ್ರಾಮದ ಜನರು ಆರ್ಥಿಕವಾಗಿ ಹಿಂದುಳಿದಿದ್ದು,ಮೂಢನಂಬಿಕೆಗಳ ದಾಸರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬಲ್ಲ ಮೂಲಗಳು ತಿಳಿಸಿರುವಂತೆ ಗ್ರಾಮದ ಮಹಿಳೆಯೋರ್ವಳು ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಉತ್ತರ ಕ್ರಿಯೆಗಳ ಸಂದರ್ಭದಲ್ಲಿ ಇನ್ನೋರ್ವ ಮಹಿಳೆಯಲ್ಲಿ ಅಸಹಜ ವರ್ತನೆ ಕಂಡು ಬಂದಿದ್ದು,ರಮಾವತಿಯ ವಾಮಾಚಾರ ಈಕೆಯನ್ನು ಬಲಿ ತೆಗೆದುಕೊಂಡಿದೆ ಮತ್ತು ರಮಾವತಿ ಗ್ರಾಮಕ್ಕೆ ದುರದೃಷ್ಟವನ್ನು ತರಲಿದ್ದಾಳೆ ಎಂದು ಹೇಳಿದ್ದಳು.

‘ನನಗೇನಾಗಿತ್ತು ಎನ್ನುವುದು ಗೊತ್ತಿಲ್ಲ. ರಮಾವತಿಯ ಹೆಸರನ್ನು ಹೇಳಿದ್ದು ನನಗೆ ನೆನಪಿಲ್ಲ. ಮೃತ ಮಹಿಳೆ ಅದೇಗೋ ನನ್ನಲ್ಲಿ ಸೇರಿಕೊಂಡಿದ್ದಳು ಮತ್ತು ಆಕೆಯ ವಶದಲ್ಲಿದ್ದಾಗ ನಾನೇನು ಹೇಳಿದ್ದೆ ಎನ್ನುವುದು ಗೊತ್ತಿಲ್ಲ ’ ಎಂದು ಆ ಮಹಿಳೆ ಪೊಲಿಸರ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾಳೆ. ಕಳೆದ 18 ವರ್ಷಗಳಲ್ಲಿ ಅಸ್ಸಾಮಿನಲ್ಲಿ ವಾಮಾಚಾರ ಸಂಬಂಧಿತ ಪ್ರಕರಣಗಳಲ್ಲಿ ಒಟ್ಟು 161 ಸಾವುಗಳು ಸಂಭವಿಸಿವೆ. 2018ರಿಂದ ರಾಜ್ಯದಲ್ಲಿ ವಾಮಾಚಾರ ವಿರೋಧಿ ಕಾಯ್ದೆಯು ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News