ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಕಾರ ಆರೋಪ : ದಲಿತ ಮಹಿಳೆ ಆತ್ಮಹತ್ಯೆ

Update: 2020-10-03 08:19 GMT

ಭೋಪಾಲ್: ಅತ್ಯಾಚಾರ ನಡೆದು ಮೂರು ದಿನಗಳು ಕಳೆದರೂ, ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ ಬೇಸತ್ತ ದಲಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

33 ವರ್ಷದ ಮಹಿಳೆ ನರಸಿಂಗಪುರ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ದಿನಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದರೂ, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದು, ಮಹಿಳೆಯ ವೇದನೆಗೆ ಕಾರಣ ಎಂದು ಸಂತ್ರಸ್ತೆಯ ಕುಟುಂಬದವರು ಆಪಾದಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳುವ ಬದಲು ಸಂತ್ರಸ್ತ ಮಹಿಳೆಯ ಪತಿ ಹಾಗೂ ಸಂಬಂಧಿಕರನ್ನು ಒಂದು ದಿನ ಠಾಣೆಯಲ್ಲಿ ಕೂಡಿಹಾಕಿ ಮರುದಿನ ಕಳುಹಿಸಿದರು ಎನ್ನುವುದು ಅವರ ಆರೋಪ.

ಶುಕ್ರವಾರ ಸಂತ್ರಸ್ತ ಮಹಿಳೆ ನೀರು ತರಲು ಹೋಗಿದ್ದಾಗ ಅದೇ ಗ್ರಾಮದ ಲೀಲಾಭಾಯಿ ಎಂಬ ಮಹಿಳೆ ಅಣಕಿಸಿದ್ದಾರೆ ಎಂದೂ ಕುಟುಂಬದ ವರು ದೂರಿದ್ದಾರೆ. ಈ ಎರಡು ಕಾರಣಗಳಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿವರಿಸಿದ್ದಾರೆ.

ಅಂತಿಮವಾಗಿ ಶುಕ್ರವಾರ ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು, ಮೂವರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯ ಜಾತಿಯವರೇ ಆಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಲೀಲಾಭಾಯಿ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಆರೋಪದಲ್ಲಿ ಗೋತಿತೊರಿಯಾ ಹೊರಠಾಣೆಯ ಉಸ್ತುವಾರಿ ಹೊಂದಿದ್ದ ಎಎಸ್‌ಐ ಮಿಶ್ರಿಲಾಲ್ ಕೋಪಡ ಅವರನ್ನು ಅಮಾನತು ಮಾಡಲಾಗಿದೆ ಎಂದು ನರಸಿಂಗಪುರ ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News