ಭೂ ಸುಧಾರಣೆ, ಎಪಿಎಂಸಿ: ಮರು ಸುಗ್ರೀವಾಜ್ಞೆ ವಿರುದ್ಧ ರಾಜಭವನದ ಎದುರು ಧರಣಿ

Update: 2020-10-03 14:54 GMT

ಬೆಂಗಳೂರು, ಅ.3: ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ಶಾಸನಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾಗಿರುವ ಸರಕಾರ ಅದೇ ಕಾಯ್ದೆಗಳಿಗೆ ಮರು ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದು, ಅವುಗಳಿಗೆ ಅನುಮೋದನೆ ನೀಡಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿಗಳ ವತಿಯಿಂದ ರಾಜಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಶನಿವಾರ ನೂರಾರು ಕಾರ್ಯಕರ್ತರು ರಾಜಭವನದ ಎದುರು ಧರಣಿ ನಡೆಸಿ, ಶಾಸನಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾದ ಸುಗ್ರೀವಾಜ್ಞೆಗಳನ್ನು ಮತ್ತೊಂದು ಬಾರಿ ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂಬ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಕರ್ನಾಟಕ ಭೂ ಸುಧಾರಣೆಗಳು (ಎರಡನೇ) ತಿದ್ದುಪಡಿ ಸುಗ್ರೀವಾಜ್ಞೆ–2020, ಕರ್ನಾಟಕ ಕೃಷಿ ಉತ್ಪಾದನಾ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಸುಗ್ರೀವಾಜ್ಞೆ–2020,  ಕೈಗಾರಿಕಾ ವಿವಾದಗಳು ಮತ್ತು ಇತರ ಕಾರ್ಮಿಕ ಕಾನೂನುಗಳು (ತಿದ್ದುಪಡಿ–2020) ಸಂಬಂಧಿಸಿದಂತೆ ಹೊರಡಿಸಿದ್ದ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು.

ಈ ಸುಗ್ರೀವಾಜ್ಞೆಗಳನ್ನು ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಅಧಿವೇಶನಗಳಲ್ಲಿ ಅನುಮೋದನೆಗಾಗಿ ಮಸೂದೆಗಳ ರೂಪದಲ್ಲಿ ಮಂಡಿಸಲಾಗಿತ್ತು. ಕರ್ನಾಟಕ ಭೂ ಸುಧಾರಣಾ (ಎರಡನೇ) ತಿದ್ದುಪಡಿ ಮಸೂದೆ 2020 ಮತ್ತು ಕರ್ನಾಟಕ ಕೃಷಿ ಉತ್ಪಾದನಾ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2020 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ವಿಧಾನ ಪರಿಷತ್ತಿನಲ್ಲಿ ಮಂಡಿಸಿಲ್ಲ.  ಆದರೆ ಕೈಗಾರಿಕಾ ವಿವಾದಗಳು ಮತ್ತು ಇತರ ಕಾರ್ಮಿಕ ಕಾನೂನುಗಳು (ಕರ್ನಾಟಕ ತಿದ್ದುಪಡಿ) ಮಸೂದೆ 2020 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ವಿಧಾನಪರಿಷತ್ತಿನಲ್ಲಿ ಮತವಿಭಜನೆ ವೇಳೆ ತಿರಸ್ಕೃತಗೊಂಡಿದೆ. ಬಳಿಕ ಸದನಗಳನ್ನು ಮುಂದೂಡಲಾಗಿದೆ.

ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಕರ್ನಾಟಕ ಭೂ ಸುಧಾರಣೆಗಳು (ಎರಡನೇ) ತಿದ್ದುಪಡಿ ಸುಗ್ರೀವಾಜ್ಞೆ–2020, ಕರ್ನಾಟಕ ಕೃಷಿ ಉತ್ಪಾದನಾ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಸುಗ್ರೀವಾಜ್ಞೆ–2020, ಕೈಗಾರಿಕಾ ವಿವಾದಗಳು ಮತ್ತು ಇತರ ಕಾರ್ಮಿಕ ಕಾನೂನುಗಳು (ತಿದ್ದುಪಡಿ–2020) ಸಂಬಂಧಿಸಿದಂತೆ ಹೊರಡಿಸಿದ್ದ ಸುಗ್ರೀವಾಜ್ಞೆಗಳಿಗೆ ಅನುಮೋದನೆ ದೊರಕಿದೆ. ಆದರೆ, ವಿಧಾನಪರಿಷತ್‍ನಲ್ಲಿ ಅನುಮತಿ ದೊರಕದ ಕಾರಣ ಇವು ನಿಷ್ಕ್ರಿಯಗೊಂಡಿವೆ.

ಇದೀಗ ಸರಕಾರ ಈ ಮೂರೂ ಮಸೂದೆಗಳು ಶಾಸನಸಭೆಯಿಂದ ಅನುಮೋದನೆ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟವು ಶಾಸನಸಭೆಗಳಲ್ಲಿ ಅಂಗೀಕಾರವಾಗದ ಮೂರೂ ತಿದ್ದುಪಡಿ ಮಸೂದೆಗಳನ್ನು ಪುನಃ ಸುಗ್ರೀವಾಜ್ಞೆಗಳನ್ನು ಹೊರಡಿಸಲು ನಿರ್ಧರಿಸಿದೆ. ಈ ರೀತಿ ಶಾಸನಸಭೆಗಳಲ್ಲಿ ಅಂಗೀಕಾರವಾಗದ ಮಸೂದೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದಾರೆ. ಇದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಕಾರ್ಯದರ್ಶಿ ಹಾಗೂ ಸಿಪಿಎಂ ಮುಖಂಡ ಕೆ.ಎನ್.ಉಮೇಶ್, ಕಾರ್ಮಿಕ ಕಾನೂನುಗಳಿಗೆ ತಂದಿರುವ ತಿದ್ದುಪಡಿಯಿಂದಾಗಿ ಈ ಅಧಿನಿಯಮಗಳಿಂದಾಗಿ 300ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ 90.76 ಶೇ. ಕಾರ್ಖಾನೆಗಳು ಪೂರ್ವಾನುಮತಿ ಇಲ್ಲದೆ ಕಾರ್ಖಾನೆಗಳನ್ನು ವಜಾಗೊಳಿಸಲು, ಹಿಂಪಡೆಯಲು ಅಥವಾ ಮುಚ್ಚಲು ಮುಕ್ತವಾಗಿರುತ್ತವೆ. ಆ ಮೂಲಕ ನಿರುದ್ಯೋಗವು ಅಗಾಧವಾಗಿ ಹೆಚ್ಚಾಗುತ್ತದೆ ಎಂದರು.

ಮೌಲ್ಯವರ್ಧನೆಯಲ್ಲಿ ಕೈಗಾರಿಕಾ ಕಾರ್ಮಿಕರ ವೇತನದ ಪಾಲು 15% ಶೇ. ಮತ್ತು ಲಾಭದ ಪಾಲು 47 ಶೇ. ಎಂದು ಮತ್ತಷ್ಟು ಸಲ್ಲಿಸಲಾಗಿದೆ. ಸ್ಥಿರ ಅವಧಿಯ ನೌಕರರ ನಿಬಂಧನೆಯೊಂದಿಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆಗಳ ಸ್ಥಾಯಿ ಆದೇಶ ಕಾಯ್ದೆಯಡಿ ರಾಜ್ಯದ ಮಾದರಿ ಸ್ಥಾಯಿ ಆದೇಶಗಳಿಗೆ ರಾಜ್ಯ ಸರಕಾರವು ತಂದ ಇತ್ತೀಚಿನ ತಿದ್ದುಪಡಿಯೊಂದಿಗೆ ಈ ಸುಗ್ರೀವಾಜ್ಞೆಗಳನ್ನು ಮರು ಪ್ರಚಾರ ಮಾಡಿದರೆ, ಕಾರ್ಮಿಕ ವರ್ಗ ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಭೂಸುಧಾರಣೆ ಕಾಯ್ದೆಯಿಂದ ತಿದ್ದುಪಡಿಯಿಂದ ರಾಜ್ಯದ ರೈತರು ಕಾರ್ಪೋರೆಟ್ ಮತ್ತು ಶ್ರೀಮಂತರ ಕರುಣೆಯಿಂದಿರಬೇಕು. ಅವರ ಭೂಮಿಯನ್ನು 2/3 ಮತ್ತು ಕಾರ್ಪೋರೇಟ್ ಆಶಯಕ್ಕೆ ತಕ್ಕಂತೆ ಉತ್ಪಾದಿಸಬೇಕು. 1995-96ರಲ್ಲಿ 1593 ಸಾವಿರ ಹೆಕ್ಟೇರ್ ಭೂಸ್ವಾಧೀನದೊಂದಿಗೆ 1,06,000 ದಿಂದ ಇಳಿದ ದೊಡ್ಡ ಭೂಮಾಲೀಕರ ಹೆಚ್ಚಳಕ್ಕೆ ಈ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಕಾರಣವಾಗಬಹುದು. ಆದ್ದರಿಂದ ರೈತರು ಮತ್ತು ಕಾರ್ಮಿಕ ವರ್ಗದವರು ಸಾರ್ವಜನಿಕವಾಗಿ ಈ 3 ಸುಗ್ರೀವಾಜ್ಞೆಗಳನ್ನು ರದ್ದು ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ಲಕ್ಷ್ಮಿ, ಸಿಐಟಿಯು ಸಂಘಟನೆಯ ಮಹಾಂತೇಶ್, ಎಸ್‍ಎಫ್‍ಐ ಸಂಘಟನೆಯ ಶಿವಕುಮಾರ ಮ್ಯಾಗಳಮನಿ, ಸಾಗರ್ ಸೇರಿದಂತೆ ಹಲವಾರು ಕಾರ್ಯಕರ್ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News