ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಿಢೀರ್ ಸಿಬಿಐ ದಾಳಿ

Update: 2020-10-05 15:41 GMT

ಬೆಂಗಳೂರು, ಅ.5: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹೊಸದಿಲ್ಲಿ, ಬೆಂಗಳೂರು, ಕನಕಪುರ ಒಳಗೊಂಡತೆ 14 ಕಡೆಗಳಲ್ಲಿ ಸಿಬಿಐ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ 57 ಲಕ್ಷ ರೂ. ನಗದು, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.

ಸೋಮವಾರ ಬೆಳ್ಳಂಬೆಳಗ್ಗೆ ಇಲ್ಲಿನ ಸದಾಶಿವನಗರದ ಶಿವಕುಮಾರ್ ಅವರ ನಿವಾಸ, ಹುಟ್ಟೂರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ, ಸಹೋದರ ಡಿ.ಕೆ.ಸುರೇಶ್ ಅವರ ಹೊಸದಿಲ್ಲಿ ನಿವಾಸ ಹಾಗೂ ಮುಂಬೈ ಸೇರಿದಂತೆ 14 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಶೋಧ ಕಾರ್ಯ ವೇಳೆ 57 ಲಕ್ಷ ನಗದು, ಆಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಅಲ್ಲದೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿತ್ತು. ನಂತರ ಆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆ ಆದೇಶಿಸಿತ್ತು. ಒಂದು ವರ್ಷದಿಂದ ಯಾವುದೇ ಕ್ರಮ ಕೈಗೊಳ್ಳದ ಸಿಬಿಐ ಇದೀಗ ಏಕಾಏಕಿ ದಾಳಿ ನಡೆಸಿರುವುದು ಹಲವು ಸಂಶಯಗಳಿಗೆ, ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ.

ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬದ ಆಪ್ತರ ಆಸ್ತಿ ಮತ್ತು ವಿವಿಧ ವ್ಯವಹಾರಗಳ ದಾಖಲೆಗಳ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಎಲ್ಲ ಕಡೆಗಳಲ್ಲಿ ಶೋಧ ಕೈಗೊಂಡಿತ್ತು. ಈ ವೇಳೆ ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ನಿವಾಸಿಗಳ ಸುತ್ತಮುತ್ತ ಜನ ಹಾಗೂ ಪಕ್ಷದ ಕಾರ್ಯಕರ್ತರ ಸಂಚಾರಕ್ಕೂ ನಿರ್ಬಂಧ ಹೇರಿದ್ದರು ಎಂದು ವರದಿಯಾಗಿದೆ.

ಮೊಬೈಲ್ ಬಂದ್?: ಸಿಬಿಐ ಅಧಿಕಾರಿಗಳ ದಾಳಿಯ ಬೆನ್ನಲ್ಲೆ ಶಿವಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರ ಮೊಬೈಲ್‍ ಫೋನ್‍ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಸ್ಥಿರ ದೂರವಾಣಿ, ಮೊಬೈಲ್ ಮತ್ತು ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿ, ಯರ ಜೊತೆಗೂ ಸಂಪರ್ಕ ಸಿಗದಂತೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಬಿಐ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ, ಭಾರೀ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಕಾರ್ಯಕರ್ತರು, ಅವರ ಅಭಿಮಾನಿಗಳು ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ರಾಜಕೀಯ ದಾಳಿ: ರಾಜ್ಯದಲ್ಲಿ ಉಪಚುನಾವಣೆ ಮತ್ತು ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವ ಸಂದರ್ಭದಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಸಿಬಿಐ ಮೂಲಕ ದಾಳಿ ನಡೆಸಿ ಹೆದರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು.

ಇಂದು ಮುಂಜಾನೆಯ ವೇಳೆಗೆ ನಮ್ಮ ಮನೆಯ ಮೇಲೆ ಸಿಬಿಐ ದಾಳಿ ನಡೆದಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲ ರೀತಿಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣವಾದ ಸ್ಪಂದನೆ ಸಿಕ್ಕಿದೆ. ಮುಂದೆಯೂ ಸಹ ಸಿಗಲಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ ಮತ್ತು ಕುಗ್ಗುವುದಾಗಲಿ ದೂರದ ಮಾತು. ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ಧರಿದ್ದೇವೆ. ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೇಡುವ ಅವಶ್ಯಕತೆ ಇಲ್ಲ. ಈ ಎಲ್ಲ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೆ ಇರಲಿ'

-ಡಿ.ಕೆ.ಸುರೇಶ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News