ಕೃಷಿ ಕೋಟಾದಡಿ ಸೀಟು: ದಾಖಲೆಗಳಿಲ್ಲದ ಅರ್ಜಿಗಳೇ ಅಧಿಕ !

Update: 2020-10-05 16:55 GMT

ಬೆಂಗಳೂರು, ಅ.5: ಕೃಷಿ ವಿವಿಗಳಲ್ಲಿ ಕೃಷಿ ಕೋಟಾದಡಿಯಲ್ಲಿ ಸೀಟು ಪಡೆಯಲು ಯತ್ನಿಸಿದ ಅಭ್ಯರ್ಥಿಗಳು ಖುಷ್ಕಿ ಭೂಮಿಯಲ್ಲಿಯೂ ಲಕ್ಷಾಂತರ ರೂ.ಗಳ ಲಾಭ ತೋರಿಸಿ ಸಿಕ್ಕಿಬಿದ್ದಿದ್ದು, ಬಹುತೇಕರು ಕೃಷಿ ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸಿಲ್ಲ. ಇನ್ನು ದಾಖಲೆಗಳೇ ಇಲ್ಲದಿರುವ ಅರ್ಜಿಗಳೇ ಅಧಿಕವಾಗಿವೆ.

ಒಬ್ಬ ವ್ಯಕ್ತಿ ಕೃಷಿ ಜತೆ ನೌಕರಿ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚು ಆದಾಯ ತೋರಿಸಿದರೆ ಕೃಷಿಯನ್ನೇ ಪ್ರಧಾನ ವೃತ್ತಿ ಎಂದು ಪರಿಗಣಿಸಲಾಗುತ್ತದೆ. ಅಂಥವರ ಮಕ್ಕಳು ಕೃಷಿಕರ ಸೀಟು ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ವೇತನಕ್ಕಿಂತ ಕೃಷಿ ಆದಾಯವನ್ನೇ ಹೆಚ್ಚು ತೋರಿಸುತ್ತಿರುವುದು ಕಂಡುಬಂದಿದೆ. ಪರಿಣಾಮ, ಕೃಷಿಕರ ಕೋಟಾದ ಸೀಟುಗಳು ಶ್ರೀಮಂತರ ಪಾಲಾಗುತ್ತಿದೆ.

ಪ್ರಾಯೋಗಿಕ ಪರೀಕ್ಷೆ ನಡೆಸದೆ ಆಯ್ಕೆ ಪಟ್ಟಿ ಪ್ರಕಟಿಸಿದೆ ಎಂಬ ಆರೋಪ ರೈತರ ಮಕ್ಕಳು ಮತ್ತು ರೈತ ಸಂಘಟನೆಗಳಿಂದ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿವಿಯು (ಜಿಕೆವಿಕೆ) ತನ್ನ ವೆಬ್‍ಸೈಟ್‍ನಲ್ಲಿ ಅನರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅನರ್ಹಗೊಳಿಸಿರುವುದೇಕೆ ಎಂಬ ಕಾರಣಸಹಿತ ವಿವರಣೆ ಇದೆ.

ಸಿಇಟಿಯಲ್ಲಿ ಬಿ.ಎಸ್ಸಿ ಕೃಷಿಗೆ 1,27,627 ಮತ್ತು ಪಶುಸಂಗೋಪನೆ ಕೋರ್ಸ್ ಗೆ 1,29,611 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ಪ್ರತಿ ವರ್ಷ ಈ ಎರಡು ವಿಭಾಗದಲ್ಲಿ 3 ಸಾವಿರ ಸೀಟುಗಳು ಲಭ್ಯವಿರಲಿದ್ದು, ಶೇ.40 ಸೀಟುಗಳು ಕೃಷಿಕರ ಕೋಟಾಕ್ಕೆ ಮೀಸಲಿಡಲಾಗಿರುತ್ತದೆ. ಈ ಪೈಕಿ ಜಿಕೆವಿಕೆ ಆನ್‍ಲೈನ್‍ನಲ್ಲಿ ದಾಖಲೆಗಳನ್ನು ಅಪ್‍ಲೋಡ್ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿ, ಆನಂತರ ಪರಿಶೀಲಿಸಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳ ಬಂಡವಾಳ ಬಯಲಾಗಿದೆ. 3,916 ಅಭ್ಯರ್ಥಿಗಳು ಅನರ್ಹಗೊಂಡಿದ್ದಾರೆ.

ಏಕೆ ಪ್ರಾಯೋಗಿಕ ಪರೀಕ್ಷೆ ಇಲ್ಲ?: ಕೃಷಿಕರ ಕೋಟಾದ ಸೀಟಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಆಯೋಜಿಸುವ ಪ್ರಾಯೋಗಿಕ ಪರೀಕ್ಷೆಗೆ ಕೋಚಿಂಗ್ ಕೇಂದ್ರಗಳ ಹಾವಳಿ ಕಾರಣವಾಯಿತೇ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ, ಕೆಲ ಕೋಚಿಂಗ್ ಕೇಂದ್ರಗಳು ಕ್ರ್ಯಾಷ್ ಕೋರ್ಸ್ ಆಯೋಜಿಸಿ ಕೃಷಿ ಬಗ್ಗೆ ಜ್ಞಾನ ಇಲ್ಲದವರಿಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಜ್ಞಾನ ತುಂಬಿ ಕಳುಹಿಸುವ ಕೆಲಸ ಮಾಡುತ್ತಿವೆ.

15-20 ದಿನದ ಕೋರ್ಸ್‍ಗೆ ವಿದ್ಯಾರ್ಥಿಗಳಿಂದ 18-20 ಸಾವಿರ ರೂ. ಪಡೆದು ರಾಗಿ, ಜೋಳ, ಭತ್ತ, ಕಡಲೆಬೀಜ ಬಿತ್ತನೆ, ಅವುಗಳನ್ನು ಗುರುತಿಸುವ ತರಬೇತಿ ನೀಡುತ್ತವೆ. ಈ ಸೀಸನ್‍ನಲ್ಲಿ ಪ್ರತಿ ತರಬೇತಿ ಕೇಂದ್ರ ಕನಿಷ್ಠ 15 ಲಕ್ಷ ರೂ. ಸಂಪಾದನೆ ಮಾಡಿದೆ. ಆದ್ದರಿಂದ ಪರೀಕ್ಷೆ ರದ್ದು ಮಾಡಲು ತೀರ್ಮಾನಿಸಿರುವ ವಿವಿ, ಈ ವಿಷಯವನ್ನು ಸರಕಾರದ ಮುಂದಿಡಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನೆಲ್ಲ ಸಲ್ಲಿಸಬೇಕಿತ್ತು?: ಕೃಷಿಕರ ಕೋಟಾದ ಸೀಟು ಪಡೆಯುವ ವಿದ್ಯಾರ್ಥಿಗಳು ಸಿಇಟಿ ಪ್ರವೇಶಪತ್ರ, ವ್ಯವಸಾಯಗಾರರ ಪ್ರಮಾಣಪತ್ರ-3, ವ್ಯವಸಾಯದ ಆದಾಯ ಪ್ರಮಾಣಪತ್ರ, ವೇತನ ದೃಢೀಕರಣ ಪತ್ರ (ಪಾಲಕರು ಉದ್ಯೋಗಿಯಾಗಿದ್ದರೆ ಮಾತ್ರ), ಖಾಸಗಿ ಆದಾಯ ಪ್ರಮಾಣ ಪತ್ರ (ಜತೆಗೆ), ಅಫಿಡವಿಟ್ ಸಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News