'ದಿಲ್ಲಿ ಹಿಂಸಾಚಾರದ ಸಂದರ್ಭ ನಕಲಿ ಸಂದೇಶಗಳನ್ನು ಅಸ್ತ್ರಗಳಂತೆ ಬಳಸಿದ ದುಷ್ಕರ್ಮಿಗಳು'

Update: 2020-10-10 07:24 GMT

ಹೊಸದಿಲ್ಲಿ : "ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಮುಸ್ಲಿಮರು ವಲಸೆ ಹೋಗುತ್ತಿದ್ದಾರೆ", "ಜಿಹಾದ್ ನ 12 ಚಿಹ್ನೆಗಳನ್ನು ಹೇಗೆ ಪತ್ತೆ ಹಚ್ಚುವುದು,'' ಇವೇ ಮುಂತಾದ ದಾರಿ ತಪ್ಪಿಸುವಂತಹ ವಾಟ್ಸ್ ಆ್ಯಪ್ ಸಂದೇಶಗಳು ಹಾಗೂ ಮುಸ್ಲಿಮರನ್ನು ಬಹಿಷ್ಕರಿಸಬೇಕೆಂಬ ಸಂದೇಶಗಳು "ಕಟ್ಟರ್ ಹಿಂದುತ್ ಏಕ್ತಾ" ಎಂಬ ವಾಟ್ಸ್ಯಾಪ್  ಗ್ರೂಪ್‍ನಲ್ಲಿ ಕಾಣಿಸಿಕೊಂಡ ಕುರಿತಂತೆ  ದಿಲ್ಲಿ ಪೊಲೀಸರು ಫೆಬ್ರವರಿಯಲ್ಲಿ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಮುಸ್ಲಿಂ ವ್ಯಕ್ತಿಯೊಬ್ಬನ ಕೊಲೆಗೆ ಸಂಬಂಧಿಸಿದಂತೆ ಸಲ್ಲಿಸಿದ ಪೂರಕ ಸಾಕ್ಷ್ಯದಲ್ಲಿ ಉಲ್ಲೇಖಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

"ಮುಸ್ಲಿಮರ ವಿರುದ್ಧ ಸೇಡು ತೀರಿಸಲು ಆ ಪ್ರದೇಶದ ಕೆಲ ಯುವಕರು ತಮ್ಮ  ಕಾರ್ಯದ ಮೂರ್ಖತನವನ್ನು ಅರ್ಥೈಸದೆ ತಮ್ಮ ಸಮುದಾಯದ ಸಂರಕ್ಷರಾಗಬೇಕೆಂದು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದ್ದರು,'' ಎಂದು ಪೊಲೀಸರು ಹೇಳುತ್ತಾರೆ.

ಚಾರ್ಜ್ ಶೀಟ್ ಪ್ರಕಾರ  ಹಿಂಸಾತ್ಮಕ ಘಟನೆಗಳು ಆರಂಭಗೊಂಡ ಮರುದಿನ, ಫೆಬ್ರವರಿ 25ರಂದು ಇದೇ ಸಂದೇಶವನ್ನು ಈ ಗ್ರೂಪ್‍ನ ಇಬ್ಬರು ಸದಸ್ಯರು  ಬೆಳಿಗ್ಗೆ 9.42ಗೆ ಶೇರ್ ಮಾಡಿದ್ದರು ಹಾಗೂ ಒಂದು ನಿಮಿಷ ನಂತರ "ಹಿಂದುಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉದ್ವಿಗ್ನತೆಯ ವಾತಾವರಣವಿದೆ ಆದರೆ ಹಿರಿಯ ಮುಸ್ಲಿಮರು ಭಯಗೊಂಡಿಲ್ಲ. ಅವರಿಗೆ ಹಿಂದುಗಳ ಸಂಸ್ಕೃತಿಯ ಕುರಿತು ಗೊತ್ತಿದೆ. ಆದರೆ ಮುಸ್ಲಿಂ ಗುಂಪು ಇರುವಾಗ ಹಿಂದುವೊಬ್ಬ ಸುರಕ್ಷಿತವಾಗಿ ಸಾಗಬಲ್ಲನೇ ಎಂದು ಯೋಚಿಸಿ.'' ಎಂಬ ಸಂದೇಶವಿತ್ತು.

ನಂತರ "ಮುಸ್ಲಿಮರಿಗೆ ಶಿಕ್ಷೆ ನೀಡಲು ಆಸ್ಪದ ನೀಡಲು,''  "ಹಿಂದುಗಳು ಸಾಯುತ್ತಿರುವಂತೆ'' ತೋರಿಸುವ ವೀಡಿಯೋಗಳನ್ನು ಮಾಡುವ ಸಲಹೆ ನೀಡಲಾಗಿತ್ತು.

ಇದಾದ ನಂತರ ನಾಲ್ಕು ಮಂದಿ ಈ ಗ್ರೂಪ್ ತೊರೆದಾಗ ಅವರಿಗೆ ಮುಸ್ಲಿಮರೆಂಬ ಹಣೆಪಟ್ಟಿ ಕಟ್ಟಲಾಯಿತು ಹಾಗೂ  ಅವರನ್ನು ಪತ್ತೆ ಹಚ್ಚುವಂತೆ ಇತರರಿಗೆ ಪ್ರೋತ್ಸಾಹಿಸಲಾಯಿತು. ಒಂದು ಹಂತದಲ್ಲಿ  'ಹಿಂದು, ಮುಸ್ಲಿಂ  ಸಂಘರ್ಷ'ದ ಕುರಿತ ಸಂದೇಶಗಳನ್ನು ಕಳುಹಿಸಲಾಯಿತು,  ಗುಂಪಿನ ಸದಸ್ಯರಿಗೆ ತಮ್ಮ ಲೊಕೇಶನ್ ಶೇರ್ ಮಾಡುವ ಮನವಿ ಮಾಡಲಾಯಿತು ಹಾಗೂ ಹಲವರು ಗಲಭೆಗಳ ಸ್ಥಳಗಳ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರು.

ಎರಡು ಗಂಟೆ ತರುವಾಯ ಅಪರಾಹ್ನ 2.16ಕ್ಕೆ ಒಬ್ಬ ಸದಸ್ಯ "ಬ್ರದರ್, ನಾನೊಬ್ಬ ಮುಸ್ಲಿಮನನ್ನು ಹಿಡಿದೆ.'' ಹಾಗೂ ಆತನ ಮೇಲೆ ದಾಳಿ ಮಾಡಿದೆ ಎಂದು ಬರೆದಿದ್ದ. ಇದರ ನಂತರ ಒಬ್ಬ ಸದಸ್ಯ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕರೆ ನೀಡಿದ್ದ.

ಇದಾದ ನಂತರ ಗ್ರೂಪ್‍ನಲ್ಲಿ ದೊಡ್ಡ ಸಂದೇಶ ಶೇರ್ ಮಾಡಿ ಸದಸ್ಯರಿಗೆ "ಗುಂಡು ಹಾರಿಸದಂತೆ ಅಥವಾ ಕತ್ತಿ ಬೀಸದಂತೆ'' ಆದರೆ ``ಆರ್ಥಿಕವಾಗಿ ಮುಸ್ಲಿಮರನ್ನು ಬಹಿಷ್ಕರಿಸುವಂತೆ''  ಸೂಚಿಸಲಾಯಿತು  ಹಾಗೂ ``ಜಗತಿನ ಹಲವು ದೇಶಗಳು ಈ  ನೀತಿ ಅನುಸರಿಸಿವೆ ಹಾಗೂ ಇದು ಅಕ್ರಮವಲ್ಲ ಹಾಗೂ ಹಿಂಸೆಗೆ ಕಾರಣವಾಗುವುದಿಲ್ಲ.'' ಎಂದು ಬರೆಯಲಾಗಿತ್ತು.

ನಂತರ ಸಂಜೆ 6.03ಕ್ಕೆ 'ಉತ್ತರಾಖಂಡ ಸೋದರರಿಗೆ' ನೀಡಿದ ಸಂದೇಶದಲ್ಲಿ `"ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಉತ್ತರ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ ಹಾಗೂ ಉತ್ರರಾಖಂಡದ ಹಲವು ಸುಂದರ ಧಾರ್ಮಿಕ ಸ್ಥಳಗಳಿಗೆ ವಲಸೆ ಹೋಗಿದ್ದಾರೆ'' ಹಾಗೂ "ಯಾರೂ ರೂ. 2,000 ಹಾಗೂ ರೂ. 2,500ರ ಆಸೆಗೆ ಬಿದ್ದು ಅವರಿಗೆ ಮನೆಗಳನ್ನು ಬಾಡಿಗೆಗೆ ನೀಡಿ ತಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬಾರದು,.'' ಎಂದು ಬರೆಯಲಾಗಿತ್ತು.

ಒಂದು ಹಂತದಲ್ಲಿ ಸಂಜೆ 6.59ಕ್ಕೆ ಭಾಗೀರಥಿ ವಿಹಾರದಲ್ಲಿನ ವಿದ್ಯುತ್ ಕಡಿತದ ವಿಚಾರವೂ ಶೇರ್ ಮಾಡಲಾಯಿತಲ್ಲದೆ ``ಎಲ್ಲಾ ಹಿಂದುಗಳು ಮುಸ್ಲಿಮರನ್ನು ಮುರಿಯಲು ಸನ್ನದ್ಧರಾಗಿರಿ,'' ಎಂಬ ಕರೆ ನೀಡಲಾಗಿತ್ತು.

ಬಿನ್ನಿ ಎಂದು ಗುರುತಿಸಲ್ಪಟ್ಟ ಒಬ್ಬ 8.01ಕ್ಕೆ ಸಂದೇಶ ಕಳುಹಿಸಿ "ಆರೆಸ್ಸೆಸ್ ಮಂದಿ ಬೆಂಬಲ ನೀಡಿದ್ದಾರೆ,'' ಎಂದಿದ್ದನಲ್ಲದೆ "ಬ್ರಿಜ್‍ಪುರಿ ಪುಲಿಯಾದಲ್ಲಿ 9 ಮುಸ್ಲಿಮರನ್ನು ಕೊಲ್ಲಲಾಗಿದೆ,  ಧೈರ್ಯದಿಂದಿರಿ.. ಕೆಲಸ ಆರಂಭವಾಗಿದೆ,.'' ಎಂದು ಬರೆದಿದ್ದ.

"ನಂ. 1 ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಮಸೀದಿಗೆ ಬೆಂಕಿ ಹಚ್ಚಿದಂತೆ ಅವರಿಗೆ ಸೇರಿದ ಎಲ್ಲವನ್ನೂ ಹೊತ್ತಿಸಿ.'' ಎಂದು ಬಿನ್ನಿ ಬರೆದಿದ್ದ. ``ಮರುದಿನ ಬೆಳಿಗ್ಗೆ ಅಲ್ಲಿಗೆ ತೆರಳಿ ಜಮೀನು ವಶಪಡಿಸಿಕೊಳ್ಳಲು, ಪ್ರತಿಮೆ ಸ್ಥಾಪಿಸಲು'' ಮಸೀದಿ ಸುತ್ತ ಬೆಳಿಗ್ಗೆ ಸೇರಲು ಕರೆಯನ್ನೂ ಆತ ನೀಡಿದ್ದ.

ಫೆಬ್ರವರಿ 26ರಂದು ಸೋಳಂಕಿ ತನ್ನ ಮೊದಲ ಸಂದೇಶದಲ್ಲಿ "ನಾನು ನನ್ನ ಗಂಗಾವಿಹಾರ ತಂಡದ ಜತೆ ಬಂದಿದ್ದೇನೆ. ನಮ್ಮಲ್ಲಿ ಎಲ್ಲವೂ ಇದೆ, ಗುಂಡು, ಬಂದೂಕು ಎಲ್ಲವೂ,'' ಎಂದಿದ್ದ. ಅದಕ್ಕೆ ಒಬ್ಬ ಪ್ರತಿಕ್ರಿಯಿಸಿ ``ನಿಮ್ಮಲ್ಲಿ .315 ಬೋರ್ ಬುಲೆಟ್ ಇದೆಯೇ?'' ಎಂದು ಕೇಳಿದ್ದ.

"ಹಿಂದುಗಳನ್ನು ಮಾನಸಿಕವಾಗಿ ಮುರಿಯಲು ಬಳಸುವ ಜಿಹಾದ್‍ನ 12 ಚಿಹ್ನೆಗಳನ್ನು'' ಪಟ್ಟಿ ಮಾಡಿ ಫೆಬ್ರವರಿ 26, ರಾತ್ರಿ 11.39ಕ್ಕೆ ಮಾಡಿದ  ಒಂದು ದೀರ್ಘ ವಾಟ್ಸ್ಯಾಪ್ ಪೋಸ್ಟ್ ಈ ಗ್ರೂಪ್‍ನಲ್ಲಿ ಹಾಕಲಾದ ಕೊನೆಯ ಪೋಸ್ಟ್ ಗಳಲ್ಲಿ ಒಂದಾಗಿತ್ತು.  ಫೆಬ್ರವರಿ 26ರಂದೇ ದಿಲ್ಲಿ ಹಿಂಸಾಚಾರ ಕೊನೆಗೊಂಡಿತು.

ಹಿಂಸಾಚಾರ ಸಂಬಂಧ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಲೋಕೇಶ್ ಕುಮಾರ್ ಸೋಳಂಕಿ, ಪಂಕಜ್ ಶರ್ಮ, ಸುಮಿತ್ ಚೌಧುರಿ, ಅಂಕಿತ್ ಚೌಧುರಿ, ಪ್ರಿನ್ಸ್, ಜತಿನ್ ಶರ್ಮ, ವಿವೇಕ್ ಪಂಚಲ್, ರಿಷಬ್ ಚೌಧುರಿ ಹಾಗೂ ಹಿಮಾಂಶು ಠಾಕುರ್ ಬಂಧಿತರು. ಇತರ ಒಂಬತ್ತು ಮಂದಿ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News