ಹತ್ರಸ್ ಆಕ್ರೋಶ ನಂತರ ಕೇಂದ್ರದಿಂದ ರಾಜ್ಯಗಳಿಗೆ ಸುತ್ತೋಲೆ: ನಿಯಮ ಪಾಲನೆಯಲ್ಲಿ ಉಲ್ಲಂಘನೆಯಾದರೆ ಕಠಿಣ ಕ್ರಮದ ಎಚ್ಚರಿಕೆ

Update: 2020-10-10 09:32 GMT

ಹೊಸದಿಲ್ಲಿ : "ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕೈಗೊಳ್ಳಬೇಕಾದ ಕಡ್ಡಾಯ ಕ್ರಮಗಳ'' ಕುರಿತು ಇರುವ  ಕಾನೂನಿನ ಕುರಿತು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ನೆನಪಿನ ಸುತ್ತೋಲೆ ಕಳುಹಿಸಿದೆ. ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶ ಸೃಷ್ಟಿಸಿದ ನಂತರದ ಬೆಳವಣಿಗೆಯಲ್ಲಿ ಇದು ನಡೆದಿದೆ.

ಇಂದು ಬಿಡುಗಡೆಗೊಳಿಸಲಾದ ಈ ಸುತ್ತೋಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು "ಕಡ್ಡಾಯ ಎಫ್‍ಐಆರ್ ದಾಖಲಿಸುವ, ಅತ್ಯಾಚಾರ ಪ್ರಕರಣವಾದಲ್ಲಿ 60 ದಿನಗಳೊಳಗೆ ತನಿಖೆ ಪೂರ್ಣಗೊಳಿಸುವ ಹಾಗೂ ಇಂತಹ ಅಪರಾಧ ನಡೆದ ಮಾಹಿತಿ ದೊರೆತ 24 ಗಂಟೆಗಳೊಳಗಾಗಿ ನುರಿತ ವೈದ್ಯರಿಂದ ಕಡ್ಡಾಯ ವೈದ್ಯಕೀಯ ತಪಾಸಣೆಯನ್ನು ಸಂತ್ರಸ್ತೆಯ ಒಪ್ಪಿಗೆ ಪಡೆದು ನಡೆಸುವ ಕುರಿತಂತೆ ಅಪರಾಧ ದಂಡ ಸಂಹಿತೆಯಲ್ಲಿರುವ ಮೂರು ಸೆಕ್ಷನ್ ಗಳನ್ನು ಉಲ್ಲೇಖಿಸಿದೆ.

ಎಲ್ಲಾ ನಿಯಮಗಳನ್ನು ಪಾಲಿಸುವಂತೆ ರಾಜ್ಯಗಳು ಎಲ್ಲಾ ಪ್ರಾಧಿಕಾರಗಳಿಗೆ ಸೂಚಿಸಬೇಕು ಹಾಗೂ ಐಟಿಎಸ್‍ಎಸ್‍ಒ (ಲೈಂಗಿಕ ಅಪರಾಧ ಪ್ರಕರಣಗಳ ತನಿಖೆಯ ಮೇಲೆ ನಿಗಾ ಇಡುವ ಆನ್ಲೈನ್ ವೆಬ್ ತಾಣ) ಮೂಲಕವೂ  ಪ್ರಕರಣಗಳ ಮೇಲೆ ನಿಗಾ  ಇಡಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವಂತೆ ನೋಡಿಕೊಳ್ಳಬೇಕೆಂದು,'' ಎಂದು ಕೇಂದ್ರದ ನೋಟಿಸ್ ಹೇಳಿದೆ.

"ಈ ಕಡ್ಡಾಯ ನಿಯಮಗಳ ಪಾಲನೆಯಲ್ಲಿ ಪೊಲೀಸರು ವಿಫಲರಾದಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳಲ್ಲಿ ನ್ಯಾಯವೊದಗಿಸಲು ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಯವೊದಗಿಸಲು ಕಷ್ಟವಾಗಬಹುದು ಹಾಗೂ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,'' ಎಂದು ಕೇಂದ್ರ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News