'ಮಾಸ್ಕ್' ವಿಶೇಷ ಅಭಿಯಾನಕ್ಕೆ ಪೊಲೀಸ್ ಆಯುಕ್ತರಿಂದ ಚಾಲನೆ

Update: 2020-10-10 12:40 GMT

ಬೆಂಗಳೂರು, ಅ.10: ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಧರಿಸುವಂತೆ ಪೊಲೀಸರ ವಿಶೇಷ ಅಭಿಯಾನಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಚಾಲನೆ ನೀಡಿದರು.

ಶನಿವಾರ ನಗರದ ಪುರಭವನ, ಕೆ.ಆರ್ ಮಾರ್ಕೆಟ್, ರಸೆಲ್ ಮಾರ್ಕೆಟ್ ಬಳಿ ‘ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಲು ಮಾಸ್ಕ್ ಧರಿಸಿ' ಎಂದು ಅಭಿಯಾನ ನಡೆಸಿ, ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಮಂತ್, ಬೆಂಗಳೂರಿನಲ್ಲಿ ಜನ ಹೆಚ್ಚು ಸೇರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಈಗಾಗಲೇ ಸರಕಾರದಿಂದ ದಂಡ ವಿಧಿಸಲು ಸೂಚನೆ ದೊರೆತಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದ ಅವರು, ಇನ್ನು ಮುಂದೆ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಒಂದು ಗಂಟೆ ಮಾಸ್ಕ್ ಬಗ್ಗೆ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ನಮ್ಮ ಉದ್ದೇಶ ದಂಡ ಹಾಕುವುದಲ್ಲ, ಜನರನ್ನು ಜಾಗೃತರಾಗಿಸಿ ಕೊರೋನ ಮುಕ್ತ ಮಾಡುವುದು ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ, ಮುರುಗನ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ  ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News