ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಎ’ಗೆ ಸೇರಿಸಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

Update: 2020-10-10 13:21 GMT

ಬೆಂಗಳೂರು, ಅ.10: ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ಗೆ ಸೇರಿಸಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಶನಿವಾರ ಪಂಚಮಸಾಲಿ ಸಮುದಾಯದ ಮುಖಂಡರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಪಂಚಮಸಾಲಿ ಸಮುದಾಯ ಪ್ರವರ್ಗ ‘3ಬಿ’ ಪಟ್ಟಿಯಲ್ಲಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಎ’ಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯದ ಜಾತಿಗಳ ಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯವನ್ನು ಸರಿಯಾಗಿ ಗುರುತಿಸಿಲ್ಲ. ಈ ಕಾರಣದಿಂದ ಮೀಸಲಾತಿಯ ಲಾಭ ಪಡೆಯಲು ಆಗಿಲ್ಲ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಎ’ಗೆ ಸೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 28ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಒಂದು ದಿನದ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ವಾಮೀಜಿ ಪ್ರಕಟಿಸಿದರು.

ಮುಖ್ಯಮಂತ್ರಿ ಸ್ಥಾನ ನೀಡಬೇಕು: ಪಂಚಮಸಾಲಿ ಜನರು ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುತ್ತಾ ಬಂದಿದ್ದಾರೆ. ಈಗ ಸಮುದಾಯದ 16 ಶಾಸಕರು ಮತ್ತು ಮೂವರು ಸಂಸದರು ಇದ್ದಾರೆ. ಆದರೆ, ಅಧಿಕಾರ ಹಂಚಿಕೆಯಲ್ಲಿ ನ್ಯಾಯ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸಂಖ್ಯೆಗೆ ಅನುಗುಣವಾಗಿ ಪಂಚಮಸಾಲಿ ಶಾಸಕರಲ್ಲಿ ಮೂವರು ಸಂಪುಟದಲ್ಲಿ ಇರಬೇಕಿತ್ತು. ಆದರೆ, ಅವಕಾಶ ನೀಡಿಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಮುಂದಿನ ಮುಖ್ಯಮಂತ್ರಿ ಸ್ಥಾನವನ್ನು ಪಂಚಮಸಾಲಿ ನಾಯಕರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಎಷ್ಟು ದಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುತ್ತಾರೋ ಗೊತ್ತಿಲ್ಲ. ಅವರ ನಂತರ ಪಂಚಮಸಾಲಿ ನಾಯಕರೇ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಸ್ವಾಮೀಜಿ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುವ ವೇಳೆಯಲ್ಲಿ ಸುರೇಶ್ ಅಂಗಡಿಯವರ ಕುಟುಂಬಸ್ಥರು ಟಿಕೆಟ್ ನಿರಾಕರಿಸಿದರೆ ನಮ್ಮ ಸಮುದಾಯದಲ್ಲಿ ಯಾರಿಗಾರದೂ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಸ್ವಾಮೀಜಿ ಹೇಳಿದರು.

ಯಾವುದೇ ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಿಧನರಾದರೆ ಅವರ ಮನೆತನಕ್ಕೆ ಟಿಕೆಟ್ ನೀಡುವ ಸಂಪ್ರದಾಯವಿದೆ. ಈ ಕುರಿತಂತೆ ಸುರೇಶ ಅಂಗಡಿ ಕುಟುಂಬಸ್ಥರು ಹಾಗೂ ಬಿಜೆಪಿ ಪಕ್ಷದವರು ವಿಚಾರ ಮಾಡಲಿದ್ದಾರೆ. ಅಂಗಡಿ ಕುಟುಂಬಸ್ಥರು ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ನಮ್ಮ ಸಮುದಾಯದಲ್ಲಿಯೇ ಸಾಕಷ್ಟು ಜನ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸರಕಾರ ಒಂದು ವೇಳೆ ನಮ್ಮ ಸಲಹೆ ಕೇಳಿದ್ರೆ ನಮ್ಮ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡುವಂತೆ ತಿಳಿಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News