ರಾಜಧಾನಿಯಲ್ಲಿ ಗುಡುಗು ಸಹಿತ ಭಾರೀ ವರ್ಷಧಾರೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Update: 2020-10-11 11:20 GMT

ಬೆಂಗಳೂರು, ಅ. 11: ನಗರದಲ್ಲಿ ಇನ್ನೆರೆಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ನಗರದಲ್ಲಿ ಶನಿವಾರ ರಾತ್ರಿಯಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು ರಿಚ್ಮಂಡ್ ಸರ್ಕಲ್, ಲಾಲ್‍ಭಾಗ್ ಶಾಂತಿನಗರ, ಟೌನ್‍ಹಾಲ್, ವಿಲ್ಸನ್ ಗಾರ್ಡನ್ ಜಯನಗರ, ವಿಜಯನಗರದ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆಯಾಗುತ್ತಿದೆ.

ನಗರದ ತಗ್ಗುಪ್ರದೇಶದ ರಸ್ತೆಗಳು, ಅಂಡರ್ ಪಾಸ್‍ಗಳಲ್ಲಿ ನೀರು ನಿಂತುಕೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿತ್ತು. ಸದ್ಯ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಶನಿವಾರ ರಾತ್ರಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಲ್ಲೇಶ್ವರಂನಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದಿದ್ದು, ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ ಒಂದು ಕಾರು, ನಾಲ್ಕು ಬೈಕ್‍ಗಳು ಜಖಂಗೊಂಡಿವೆ.

ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಕೈಗೊಂಡಿದೆ. ಮಲ್ಲೆಶ್ವರಂ ಮಂತ್ರಿ ಮಾಲ್ ಮುಂಭಾಗ, ಕೋರಮಂಗಲ ಆರನೆ ಬ್ಲಾಕ್‍ನ ರಸ್ತೆಗಳು ಹಾಗೂ ವರ್ತೂರು ಫೋರಂ ಮಾಲ್ ಬಳಿ ರಾಜಕಾಲುವೆಗಳ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯಿಂದ ನೀರು ನಿಂತಿದೆ. ಹೆಬ್ಬಾಳದ ಗುಡ್ಡದಹಳ್ಳಿ ಹಾಗೂ ಗಂಗಮ್ಮ ಬಡಾವಣೆಗೆ ನೀರು ನುಗ್ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News