ನಕಲಿ ಗುರುತಿನ ಚೀಟಿ ಬಳಸಿ ಆಯ್ಕೆ ಆರೋಪ: ಮುನಿರತ್ನ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2020-10-13 10:43 GMT

ಬೆಂಗಳೂರು, ಅ. 13: ಇಲ್ಲಿನ ರಾಜರಾಜೇಶ್ವರಿ ನಗರ(ಆರ್‍ಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಮುನಿರತ್ನ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸುವ ಮೂಲಕ `ಉಪ ಚುನಾವಣೆ' ಗೊಂದಲಕ್ಕೆ ತೆರೆ ಎಳೆದಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠ ಮೇಲ್ಕಂಡ ಆದೇಶ ನೀಡಿದೆ. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು ಮತದಾರರ ನಕಲಿ ಗುರುತಿನ ಚೀಟಿ ಬಳಸಿ ಮತ ಪಡೆದು ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಹೈಕೋರ್ಟಿಗೆ ಮೊದಲು ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸದೆ ಬಾಕಿ ಇರಿಸಿ ಕ್ಷೇತ್ರದ ಚುನಾವಣೆ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದಿರುವುದರಿಂದ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡು ಟಿಕೆಟ್ ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಮುನಿರತ್ನ ಅವರ ಸ್ಪರ್ಧೆ ಇದೀಗ ನಿರಾತಂಕವಾದಂತಾಗಿದೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಬೇಕಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಘೋಷಣೆ ಮಾಡಲಾಗಿದೆ.

ಮುನಿರತ್ನ ಅವರ ಸ್ಪರ್ಧೆಯೇ ಅತಂತ್ರ ಸ್ಥಿತಿಯಲ್ಲಿತ್ತು. ಇದೀಗ ಸುಪ್ರೀಂ ಕೋರ್ಟ್ ತುಳಸಿ ಮುನಿರಾಜು ಗೌಡ ಅವರ ಅರ್ಜಿ ವಜಾಗೊಳಿಸುವ ಮೂಲಕ ಮುನಿರತ್ನ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಮುನಿರತ್ನ ಆರ್‍ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಇಂದು ಬೆಳಗ್ಗೆಯೂ ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದ ಮುನಿರತ್ನ ಹಿರಿಯ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

ನ್ಯಾಯಕ್ಕೆ ಸಂದ ಗೆಲುವು: `2018ರ ಚುನಾವಣೆಯಲ್ಲಿ ಒಂದೇ ಒಂದು ಮತವೂ ನಕಲಿಯಾಗಿರಲಿಲ್ಲ. ಆದರೂ ನಕಲಿ ಮತದಾನದ ನೆಪದಲ್ಲಿ ನನ್ನನ್ನು ನೋಯಿಸಲಾಯಿತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಕೊನೆಗೂ ನ್ಯಾಯಕ್ಕೆ ಜಯ ಸಿಕ್ಕಂತೆ ಆಗಿದೆ' ಎಂದು ಮಾಜಿ ಶಾಸಕ ಹಾಗೂ ಆರ್‍ಆರ್ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ತಿಳಿಸಿದ್ದಾರೆ.

'ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ನನಗೆ ಟಿಕೆಟ್ ನೀಡುವ ಸಂಬಂಧ ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದು, ಅವರ ನಿರ್ಧಾರಕ್ಕೆ ನಾನು ಬದ್ಧ. ನನ್ನ ವಿರುದ್ಧ ಸ್ಪರ್ಧಿಸಿದ್ದ ತುಳಸಿ ಮುನಿರಾಜು ಗೌಡ ಅವರ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಚುನಾವಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೋರ್ಟ್ ತೀರ್ಪಿಗೆ ನಾನು ತಲೆಬಾಗುತ್ತೇನೆ' ಎಂದು ಮುನಿರತ್ನ ಹೇಳಿದರು.

ಚುನಾವಣೆ ಎಂದ ಮೇಲೆ ಆರೋಪ-ಪ್ರತ್ಯಾರೋಪ ಸಹಜ. ಕೋರ್ಟ್, ಕೇಸು ಎಲ್ಲವೂ ಇದ್ದದ್ದೆ. ಇದೀಗ ನಾನು ಮತ್ತು ತುಳಸಿ ಮುನಿರಾಜು ಗೌಡ ಒಂದೇ ಪಕ್ಷದಲ್ಲಿದ್ದೇವೆ. ಅಣ್ಣ ತಮ್ಮಂದಿರ ಮಧ್ಯೆ ಜಗಳಗಳಾದರೂ ಮತ್ತೆ ಒಂದಾಗುತ್ತಾರೆ. ಹೀಗಾಗಿ ನಮ್ಮನಮ್ಮಲ್ಲಿ ವೈಯಕ್ತಿಕ ದ್ವೇಷ ಬೇಡ. ನಾವಿಬ್ಬರೂ ಒಗ್ಗಟ್ಟಿನಿಂದ ಪಕ್ಷ ಕಟ್ಟುವ ಕೆಲಸ ಮಾಡೋಣ. ಕ್ಷೇತ್ರದ ಜನತೆ ನನ್ನನ್ನು ಕೆಲಸಗಾರ ಎಂದುಕೊಂಡು ನನ್ನೊಂದಿಗೆ ಇದ್ದಾರೆ'
-ಮುನಿರತ್ನ, ಬಿಜೆಪಿ ಟಿಕೆಟ್ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News