ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕೊರೋನ

Update: 2020-10-14 07:02 GMT

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ತೀವ್ರಗೊಳ್ಳುತ್ತಿದೆ. ನಿತ್ಯವೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಈ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಂತೂ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕೊರೋನ ಸಕ್ರಿಯ ಸೋಂಕು ಪ್ರಕರಣಗಳನ್ನು ಹೊಂದಿರುವ ದೇಶದ ಬೃಹತ್ ನಗರಗಳ ಪೈಕಿ ಬೆಂಗಳೂರು ಈಗ ಮೊದಲ ಸ್ಥಾನದಲ್ಲಿದೆ. ಉದ್ಯಾನ ನಗರಿಯಲ್ಲಿ 68 ಸಾವಿರಕ್ಕೂ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಪುಣೆ, ಮುಂಬೈ, ದಿಲ್ಲಿ ನಗರಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೊರೋನ ಸೋಂಕು ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಮೊದಲ ಕೊರೋನ ಸಾವಿನ ಪ್ರಕರಣ ಕಲಬುರಗಿಯಲ್ಲಿ ವರದಿಯಾದರೂ ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತ್ತು. ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿರಲಿಲ್ಲ. ಲಾಕ್‌ಡೌನ್ ನಂತರ ಜೂನ್ ತಿಂಗಳಲ್ಲೂ ಕೊರೋನ ನಿಯಂತ್ರಣದಲ್ಲಿತ್ತು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕೊರೋನ ನಿಯಂತ್ರಿಸುವಲ್ಲಿ ಕೈಗೊಂಡ ಕ್ರಮಗಳು ಶ್ಲಾಘನೀಯ ಎಂದು ಕೇಂದ್ರ ಸರಕಾರವೂ ಪ್ರಶಂಸಿಸಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ರಾಜ್ಯದಲ್ಲಿ ಪ್ರತಿದಿನವೂ ಹತ್ತು ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಕರ್ನಾಟಕದಲ್ಲಿ ಕೊರೋನ ವೈರಾಣು ಈ ಪರಿ ವ್ಯಾಪಿಸುತ್ತಿರುವುದಕ್ಕೆ ಕಾರಣವೇನು ಎಂದು ಹುಡುಕಲು ಹೊರಟರೆ ಸರಕಾರದ ಮಾತ್ರವಲ್ಲ ಸಾರ್ವಜನಿಕರ ನಿರ್ಲಕ್ಷ ಧೋರಣೆಯೂ ಇದರಲ್ಲಿ ಪಾಲು ಪಡೆದಿದೆ ಎಂದು ಹೇಳಬೇಕಾಗುತ್ತದೆ. ಕೋವಿಡ್ ಮಾರ್ಗದರ್ಶಿ ಸೂತ್ರಗಳು ಮತ್ತು ಸುರಕ್ಷಾ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ ಇತ್ಯಾದಿ ಕಡೆಗಳಲ್ಲಿ ಮಾಸ್ಕ್ ಇಲ್ಲದೆ ಅಥವಾ ಕಾಟಾಚಾರಕ್ಕೆ ಕೊರಳಿಗೆ ಮಾಸ್ಕ್ ಸಿಲುಕಿಸಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಸರಕಾರ ಎಚ್ಚರಿಕೆ ನೀಡಿದರೂ ಜನರು ಮನಬಂದಂತೆ ಸುರಕ್ಷಾ ನಿಯಮಗಳನ್ನು ಧಿಕ್ಕರಿಸಿ ಓಡಾಡುತ್ತಿದ್ದಾರೆ.

ಕೊರೋನ ಸೋಂಕು ಮತ್ತು ಸಾವು ಹೆಚ್ಚಾಗಲು ಇನ್ನೊಂದು ಕಾರಣವೆಂದರೆ ಸರಕಾರಿ ಆಸ್ಪತ್ರೆಗಳ ನಿರ್ಲಕ್ಷದ ಧೋರಣೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಕುಸಿಯುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಂತೂ ಕೊರೋನ ಹೆಸರಿನಲ್ಲಿ ಜನಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ದೋಚಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಸರಕಾರ ಯಾವುದೇ ನಿಯಂತ್ರಣ ಹೇರಿದಂತೆ ಕಾಣುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್‌ಗಳನ್ನು ಸರಕಾರದಿಂದ ಕಳಿಸುವ ರೋಗಿಗಳಿಗೆ ಉಚಿತವಾಗಿ ನೀಡಬೇಕೆಂಬ ರಾಜ್ಯ ಸರಕಾರದ ಆದೇಶ ಬರೀ ಕಾಗದದಲ್ಲಿದೆ. ಪರಿಸ್ಥಿತಿ ಹೀಗೇ ಇದ್ದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇನ್ನು ಐದು ತಿಂಗಳಲ್ಲಿ 25 ಲಕ್ಷಕ್ಕೆ ಹೆಚ್ಚಲಿದೆ ಹಾಗೂ ಸಾವಿನ ಸಂಖ್ಯೆ 25 ಸಾವಿರಕ್ಕೆ ಏರಲಿದೆ ಎಂದು ವೈದ್ಯಕೀಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಇಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ತಪಾಸಣೆ ಮಾಡಿ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂಬ ದೂರುಗಳಿವೆ. ಯಾವುದೇ ದೈಹಿಕ ತೊಂದರೆಗೆ ಆಸ್ಪತ್ರೆಗಳಿಗೆ ಬಂದರೆ ಮೊದಲು ಕೋವಿಡ್ ಪರೀಕ್ಷೆಯನ್ನು ಮಾಡಿ ಕೊರೋನ ಇರುವುದು ಖಚಿತವಾದರೆ ಕ್ವಾರಂಟೈನ್‌ಗೆ ಕಳಿಸುತ್ತಾರೆ. ಉಳಿದ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಕೊರೋನ ಬಂದ ನಂತರ ಪ್ರಮುಖ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಪರೀಕ್ಷಾ ಪ್ರಯೋಗಾಲಯಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಅವುಗಳನ್ನು ಬಳಸಿಕೊಳ್ಳಲು ಪರಿಣಿತರ ಕೊರತೆ ಇದೆ. ಈಗಿರುವ ಸಿಬ್ಬಂದಿಗೆ ಅವುಗಳನ್ನು ಉಪಯೋಗಿಸುವ ಬಗ್ಗೆ ಸೂಕ್ತವಾದ ತರಬೇತಿ ಇಲ್ಲ. ಜೊತೆಗೆ ಈಗಿರುವ ಕೆಲವೇ ಸಿಬ್ಬಂದಿಯ ಮೇಲೆ ವಿಪರೀತ ಕೆಲಸದ ಒತ್ತಡ ಬೀಳುತ್ತಿದೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಹಗಲೂ ರಾತ್ರಿ ದುಡಿದ ಶುಶ್ರೂಷಕರಲ್ಲಿ ಅನೇಕರು ರಾಜೀನಾಮೆ ನೀಡಿ ಮನೆ ಸೇರಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋದರೆ ವೈದ್ಯಕೀಯ ವ್ಯವಸ್ಥೆಯ ಮೇಲೆ ಇನ್ನಷ್ಟು ಹೊರೆ ಬೀಳುತ್ತದೆ. ಅದನ್ನು ನಿಭಾಯಿಸುವ ಸ್ಥಿತಿಯಲ್ಲಿ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಾಗಲಿ, ಖಾಸಗಿ ಆಸ್ಪತ್ರೆಗಳಾಗಲಿ ಇಲ್ಲ.

ಕೊರೋನ ನಿಯಂತ್ರಣದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಡಲು ಸಾವು ಮತ್ತು ಸೋಂಕಿನ ಮಾಹಿತಿಯನ್ನು ರಾಜ್ಯದ ಬಿಜೆಪಿ ಸರಕಾರ ಬಚ್ಚಿಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಸರಕಾರ ಉತ್ತರಿಸಬೇಕಾಗಿದೆ.

ಕೊರೋನ ಬಗ್ಗೆ ಮಾಹಿತಿ ಕೇಳಿ ನಿರಂತರವಾಗಿ ಪತ್ರ ಬರೆದರೂ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರು ಉತ್ತರ ನೀಡುತ್ತಿಲ್ಲ ಎಂಬುದು ಸಿದ್ದರಾಮಯ್ಯನವರ ಆರೋಪ ಮಾತ್ರವಲ್ಲ ಮಾಜಿ ಸಚಿವ ಎಚ್.ಕೆ.ಪಾಟೀಲರ ಆಕ್ಷೇಪವೂ ಆಗಿದೆ. ಅಷ್ಟೇ ಅಲ್ಲದೆ ಕೊರೋನ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕರು ಆಪಾದಿಸಿದ್ದಾರೆ.

ಯಡಿಯೂರಪ್ಪನವರ ಸರಕಾರ ಆರೋಗ್ಯ ಸಚಿವರನ್ನೇನೊ ಬದಲಾವಣೆ ಮಾಡಿದೆ.ಆದರೆ ಸಚಿವರ ಬದಲಾವಣೆಯಿಂದ ಮಾತ್ರ ಎಲ್ಲವೂ ಸರಿ ಹೋಗುವುದಿಲ್ಲ. ಕೊರೋನ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಅಲ್ಲದೆ ಸಾರ್ವಜನಿಕರು ಕೂಡ ಸುರಕ್ಷಾ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News