ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಆಡಳಿತ ಭವನ ನಿರ್ಮಾಣ: ಡಾ.ಕೆ.ಸುಧಾಕರ್

Update: 2020-10-13 18:56 GMT

ಬೆಂಗಳೂರು, ಅ.13: ರಾಮನಗರದಲ್ಲಿ ಶೀಘ್ರದಲ್ಲೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲಾ ಕೇಂದ್ರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ನಿರ್ಮಾಣ ಆಗಬೇಕೆಂದು 2007ರಲ್ಲೆ ತೀರ್ಮಾನ ಆಗಿತ್ತು ಎಂದರು.

2019ರಲ್ಲಿ ಟೆಂಡರ್ ಗೆ ಅನುಮೋದನೆ ಆಗಿತ್ತು. ಆದರೆ ಜಮೀನು ಮಾಲಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ತಡವಾಯಿತು. ಅದಕ್ಕೆ ಮತ್ತೆ ಜೀವ ನೀಡಲಾಗಿದೆ. ಮುಖ್ಯಮಂತ್ರಿ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ರಾಜೀವ್ ಗಾಂಧಿ ವಿವಿಯ 25ನೆ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಲಾಗಿದೆ. ಆದರೆ ವಿವಿಗೆ ಪ್ರತ್ಯೇಕ ಆಡಳಿತ ಕಟ್ಟಡ ಇಲ್ಲ ಎಂಬುದು ವಿಪರ್ಯಾಸ. ಶೀಘ್ರದಲ್ಲೆ ರಾಮನಗರದಲ್ಲಿ ವಿಶ್ವವಿದ್ಯಾಲಯ ಆರಂಭವಾಗಲಿದೆ ಎಂದು ಸುಧಾಕರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ರಾಜೀವ್‍ಗಾಂಧಿ ವಿವಿಗೆ ಸಂಬಂಧಿಸಿದಂತೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೂ, ಅನಾವಶ್ಯಕವಾಗಿ ಮಂದಗತಿಯಲ್ಲಿ ಈ ಯೋಜನೆ ಸಾಗುತ್ತಿದೆ ಎಂದು ನನ್ನ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಕರೆದು ಉನ್ನತಮಟ್ಟದ ಸಭೆ ನಡೆಸಿ, ಒಂದು ಮಾದರಿಯಾದ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.

ಟಿಕೆಟ್ ವಿಶ್ವಾಸ: ಬಿಜೆಪಿ ಸಂಸೃತಿ ಕೊಟ್ಟ ಮಾತು ತಪ್ಪುವುದಿಲ್ಲ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಸಿಗುತ್ತೆ ಎಂದು ಪ್ರಾರಂಭದಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಸುಪ್ರೀಂಕೋರ್ಟ್‍ನಲ್ಲಿಯೂ ಅವರ ವಿರುದ್ಧ ಹಾಕಲಾಗಿದ್ದ ಪ್ರಕರಣ ವಜಾ ಆಗಿದೆ ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News