ಕೆಎಸ್ಸಾರ್ಟಿಸಿ 'ಸ್ತ್ರೀ ಶೌಚಾಲಯ', 'ಮೊಬೈಲ್ ಫೀವರ್ ಕ್ಲಿನಿಕ್'ಗೆ ರಾ. ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ

Update: 2020-10-14 11:58 GMT

ಬೆಂಗಳೂರು, ಅ 14: ಕೊರೋನ ವೈರಸ್ ಸೋಂಕಿನ ಸಂಕಷ್ಟದಲ್ಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿಪಡಿಸಿದ ವಿನೂತನ `ಸ್ತ್ರೀ ಶೌಚಾಲಯ ಮತ್ತು ಮೊಬೈಲ್ ಫೀವರ್ ಕ್ಲಿನಿಕ್' ಯೋಜನೆಗಳಿಗೆ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ `ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ ವರ್ಗದಲ್ಲಿ' ಪ್ರಶಸ್ತಿ ಲಭಿಸಿದೆ.

ಬುಧವಾರ ಆನ್‍ಲೈನ್ ಮೂಲಕ ಮುಂಬೈನಲ್ಲಿ ನಡೆದ ವರ್ಚುವಲ್ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದರು. ಕೊವಿಡ್ ಪರಿಸ್ಥಿತಿಯಲ್ಲೂ ನಮ್ಮ ಸಿಬ್ಬಂದಿಗಳು ಕೊರೋನ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪ್ರಶಸ್ತಿಯನ್ನು ನಮ್ಮ ಸಿಬ್ಬಂದಿಗಳಿಗೆ, ಅದರಲ್ಲಿಯೂ ಕೋವಿಡ್‍ಗೆ ತುತ್ತಾಗಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡ ಸಿಬ್ಬಂದಿಗಳು ಹಾಗೂ ಅವರ ಪರಿವಾರದವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

ಸಾರಿಗೆ ನಿಗಮವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದಾಗಲೂ, ನಾವು ನಮ್ಮ ಕಾರ್ಯದಿಂದ ವಿಮುಖರಾಗದೆ, ಎಂದಿನಂತೆ ಶ್ರದ್ಧೆ ಮತ್ತು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ಫಲ ಈ ಪ್ರಶಸ್ತಿಯಾಗಿದೆ. ಪ್ರಶಸ್ತಿ ಪುರಸ್ಕಾರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದರೊಂದಿಗೆ, ಸಾಮಾಜಿಕ ಬದ್ಧತೆಯಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತದೆ ಎಂದು ಕಳಸದ ಇದೇ ವೇಳೆ ತಿಳಿಸಿದರು.

`ಸ್ತೀ ಶೌಚಾಲಯ ಮತ್ತು ಮೊಬೈಲ್ ಫೀವರ್ ಕ್ಲಿನಿಕ್ ಈ ಎರಡೂ ಉಪಕ್ರಮಗಳನ್ನು ಸಾರಿಗೆ ನಿಗಮದ ಅನುಪಯುಕ್ತ ಬಸ್ಸನ್ನು ಉಪಯೋಗಿಸಿಕೊಂಡು ನಿರ್ಮಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸದರಿ ಉಪಕ್ರಮಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಮಾನ್ಯತೆ ದೊರಕಿರುವುದು ಸಂತಸದ ಸಂಗತಿ. `ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ ವರ್ಗ'ದಲ್ಲಿ ಸಂಸ್ಥೆಗೆ ಈ ಪ್ರಶಸ್ತಿ ಲಭಿಸಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News