ಮಹಾರಾಷ್ಟ್ರ ರಾಜ್ಯಪಾಲರ ಉದ್ಧಟತನ

Update: 2020-10-15 06:52 GMT

ಸಂವಿಧಾನದ ಪ್ರಕಾರ ಭಾರತ ಹಲವು ರಾಜ್ಯಗಳ ಒಕ್ಕೂಟ. ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮ, ರಾಷ್ಟ್ರೀಯತೆಗಳ ಸಂಗಮವಿದು. ಇಂತಹ ನೆಲದಲ್ಲಿ ರಾಜ್ಯಗಳ ಸ್ವಾಯತ್ತತೆ, ಕೇಂದ್ರದ ಅಧಿಕಾರ ವ್ಯಾಪ್ತಿಯ ಬಗ್ಗೆ ಆಗಾಗ ವಿವಾದಗಳು ಉಂಟಾಗುತ್ತಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಮತ್ತು ಕೇಂದ್ರಗಳ ನಡುವೆ ಜಿಎಸ್‌ಟಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮುಖಾಮುಖಿ ಬಿರುಸಿನ ಮಾತುಗಳು ಕೇಳಿ ಬರುತ್ತಲೇ ಇವೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರ ಪಾತ್ರದ ಬಗೆಗೂ ಹಲವಾರು ಪ್ರಶ್ನೆಗಳು ಒಡಮೂಡುತ್ತಿವೆ. ಈಗ ಯಾಕೆ ಅದು ಮುನ್ನೆಲೆಗೆ ಬಂದಿದೆಯೆಂದರೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮಾಡಿದ ಕಿತಾಪತಿ.

ಕೊರೋನ ನಂತರ ಬೀಗ ಹಾಕಲ್ಪಟ್ಟ ದೇವಾಲಯ ಹಾಗೂ ಇತರ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ವಿಚಾರದಲ್ಲಿ ಅಲ್ಲಿನ ರಾಜ್ಯಪಾಲ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ವೈಮನಸ್ಸು ಉಂಟಾಗಿದೆ. ಇಬ್ಬರ ನಡುವೆ ಬಹಿರಂಗವಾಗಿ ಮಾತಿನ ಸಮರ ನಡೆದಿದೆ. ಮಹಾರಾಷ್ಟ್ರ ಅದರಲ್ಲೂ ಮುಂಬೈಯಲ್ಲಿ ಕೋವಿಡ್ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿಸಿದೆ. ಮುಚ್ಚಿಸಲ್ಪಟ್ಟ ದೇವಸ್ಥಾನ ಗಳನ್ನು ತೆರೆಯುವಂತೆ ಬಿಜೆಪಿ ಸೇರಿದಂತೆ ಸಂಘಪರಿವಾರದ ವಿವಿಧ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಿವೆ. ಈ ಒತ್ತಾಯಕ್ಕೆ ಮಣಿಯದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹಂತದಲ್ಲಿ ನಡುವೆ ಬಾಯಿ ಹಾಕಿದ ರಾಜ್ಯಪಾಲ ಕೋಶಿಯಾರಿ ‘‘ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ’’ ಎಂದು ಹೇಳಿ ‘‘ಠಾಕ್ರೆ ಅವರು ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ?’’ ಎಂದು ಲೇವಡಿ ಮಾಡಿದ್ದಾರೆ.ಇದಕ್ಕೆ ತಿರುಗೇಟು ನೀಡಿರುವ ಠಾಕ್ರೆ ‘‘ಜಾತ್ಯತೀತತೆ ಎಂಬುದು ಸಂವಿಧಾನದ ಭಾಗ. ನೀವು ರಾಜ್ಯಪಾಲರಾಗಿ ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಹಿಂದುತ್ವದ ಬಗ್ಗೆ ಉಪದೇಶ ಮಾಡಬೇಡಿ’’ ಎಂದಿದ್ದಾರೆ.

ಮಹಾರಾಷ್ಟ್ರದ ರಾಜ್ಯಪಾಲರು ಬಳಸಿದ ಭಾಷೆಯ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಹಿರಿಯ ನಾಯಕ ಶರದ್ ಪವಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರಾದವರು ಆಡಬಾರದ ಮಾತನ್ನು ಕೋಶಿಯಾರಿ ಆಡಿದ್ದಾರೆ. ಅವರಾಡಿದ ಮಾತು ಯಾವುದೇ ಸಂಘಪರಿವಾರದ ಕಾರ್ಯಕರ್ತನ ಬಾಯಿಯಿಂದ ಬಂದರೆ ಅಚ್ಚರಿಯಾಗುತ್ತಿರಲಿಲ್ಲ. ಸಂವಿಧಾನದ ರಕ್ಷಕನ ಹುದ್ದೆಯನ್ನು ಅಲಂಕರಿಸಿದವರಿಂದ ಇಂತಹ ಪ್ರಚೋದಕ ಮಾತು ಬರುವುದು ಸರಿಯಲ್ಲ. ಇದು ಅವರ ಘನತೆಗೆ ತಕ್ಕ ಮಾತಲ್ಲ. ಸಾಮಾನ್ಯವಾಗಿ ಪ್ರವಾಸಿ ತಾಣಗಳು, ದೇವಾಲಯಗಳು ಸದಾ ಜನಜಂಗುಳಿಯಿಂದ ತುಂಬಿರುವ ಸ್ಥಳಗಳಾಗಿವೆ. ಆದ್ದರಿಂದ ಇಂತಹ ಜಾಗಗಳಲ್ಲಿ ವೈಯಕ್ತಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೆಲ ಕಾಲ ಕೊರೋನ ನಿಯಂತ್ರಣಕ್ಕೆ ಬರುವವರೆಗೆ ಇವುಗಳಿಗೆ ಬೀಗ ಹಾಕಿದರೆ ತಪ್ಪಿಲ್ಲ. ದೇವರೇನೂ ಬೇಸರ ಮಾಡಿಕೊಳ್ಳುವುದಿಲ್ಲ. ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಭಾರತೀಯರು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಆದರೆ ದೇವರನ್ನು ಹೊಟ್ಟೆಪಾಡಿಗಾಗಿ, ಮಾತ್ರವಲ್ಲ ಹಣ ಗಳಿಸಲು ಬಳಸಿಕೊಳ್ಳುವ ಕೆಲವರಿಗೆ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಇದರಿಂದ ತೊಂದರೆಯಾಗಿರಬಹುದು. ಹಾಗಾಗಿ ಇವುಗಳನ್ನು ತೆರೆದು ಕೊರೋನ ಹೆಚ್ಚಾಗಲು ಅವಕಾಶ ನೀಡುವುದು ಸರಿಯಲ್ಲ. ಈ ದೃಷ್ಟಿಯಿಂದ ಮಹಾರಾಷ್ಟ್ರ ಸರಕಾರದ ನಿಲುವು ಸರಿಯಾಗಿದೆ. ಆದರೆ ರಾಜ್ಯಪಾಲರು ಇದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ದಾರೆ.

ವಾಸ್ತವವಾಗಿ ರಾಜ್ಯಪಾಲರ ಹುದ್ದೆ ಎಂಬುದು ಸರಕಾರದ ಬೊಕ್ಕಸಕ್ಕೆ ಭಾರವಾದ ಬಿಳಿಯಾನೆಯಂತಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವು, ಇತರ ಪಕ್ಷಗಳು ಅಧಿಕಾರದಲ್ಲಿ ಇರುವ ಸರಕಾರಗಳಿಗೆ ಕಿರಿಕಿರಿ ನೀಡಲು ರಾಜ್ಯಪಾಲರ ಕಚೇರಿಯನ್ನು ಬಳಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಹಾರಾಷ್ಟ್ರ ರಾಜ್ಯಪಾಲರ ಇತ್ತೀಚಿನ ಮತ್ತು ಹಿಂದಿನ ವರ್ತನೆಗಳು ಇದಕ್ಕೆ ಸಾಕ್ಷಿಯಾಗಿವೆ. ಈ ಹುದ್ದೆಯ ಔಚಿತ್ಯದ ಬಗ್ಗೆ ಚರ್ಚೆ ನಡೆಯಬೇಕಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯಪಾಲರ ಹುದ್ದೆಯ ಔಚಿತ್ಯದ ಬಗ್ಗೆ ಪ್ರಶ್ನೆಗಳು ಉದ್ಬವವಾಗುತ್ತಲೇ ಇವೆ. ರಾಜ್ಯಪಾಲರ ಹುದ್ದೆ ಎಂಬುದು ನಿವೃತ್ತ ಹಾಗೂ ಅತೃಪ್ತ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸಲು ಬಳಕೆಯಾಗುತ್ತಿದೆ ಎಂಬುದು ಬರೀ ಟೀಕೆಯಲ್ಲ. ಅಷ್ಟೇ ಅಲ್ಲ ರಾಜ್ಯಗಳ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಜಭವನಗಳನ್ನು ಬಳಸಿಕೊಳ್ಳುತ್ತಿರುವುದು ಸುಳ್ಳೇನಲ್ಲ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿ ವರ್ತನೆಯನ್ನು ಗಮನಿಸಬೇಕು. ಆ ರಾಜ್ಯದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೆ ರಾಜ್ಯಪಾಲ ಕೋಶಿಯಾರಿ ಅಡ್ಡಿಯುಂಟು ಮಾಡಿದ್ದರು. ಈಗ ಇದೇ ಕೋಶಿಯಾರಿ ಒಂದು ಕೋಮುವಾದಿ ಸಂಘಟನೆಯ ಭಕ್ತನಂತೆ ಮಾತಾಡಿದ್ದಾರೆ.ಇದನ್ನು ಸಂವಿಧಾನದಲ್ಲಿ ನಂಬಿಕೆ ಹೊಂದಿರುವ ಎಲ್ಲರೂ ವಿರೋಧಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News