ಅಮಾಯಕ ಅಭ್ಯರ್ಥಿ ಮೇಲೆ ಎಫ್‍ಐಆರ್ ದಾಖಲಿಸಿರುವುದು ಹೇಡಿತನದ ರಾಜಕಾರಣ: ಡಿ.ಕೆ.ಶಿವಕುಮಾರ್

Update: 2020-10-15 12:05 GMT

ಬೆಂಗಳೂರು, ಅ. 15: ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಅವರ ವಿರುದ್ಧ ಸರಕಾರ ಹಾಗೂ ಪೊಲೀಸರು ಎಫ್‍ಐಆರ್ ದಾಖಲಿಸುವ ಮೂಲಕ ನೀಚ ಹಾಗೂ ಹೇಡಿತನದ ರಾಜಕಾರಣ ಮಾಡುತ್ತಿದ್ದಾರೆ. ಸರಕಾರದ ಈ ಬೆದರಿಕೆ ತಂತ್ರಕ್ಕೆ ನಾವು ಹೆದರುವುದಿಲ್ಲ, ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿನ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಹೆಣ್ಣುಮಗಳ ಮೇಲೆ ಪ್ರಕರಣ ದಾಖಲಿಸಿದ ನೀಚ ರಾಜಕಾರಣವನ್ನು ನನ್ನ ರಾಜಕೀಯ ಬದುಕಿನಲ್ಲಿ ಕಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ಹೊಲಸು ರಾಜಕೀಯವನ್ನು ಎಲ್ಲೂ ನೋಡಿಲ್ಲ. ಮುಗ್ಧ, ಅಮಾಯಕ, ನೊಂದ-ಬೆಂದ ಹೆಣ್ಣುಮಗಳ ಮೇಲೆ ದಬ್ಬಾಳಿಕೆ ತೋರಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ ಎಂದು ದೂರಿದರು.

ನಾಮಪತ್ರ ಸಲ್ಲಿಸಲು ಬೆಳಗ್ಗೆ 11.30 ರಿಂದ 12.30 ನಡುವೆ ಕಾಲಾವಕಾಶ ಪಡೆದಿದ್ದೆವು. ಪಕ್ಷದ ಅಭ್ಯರ್ಥಿ ಜತೆಗೆ ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇರೆ ಬೇರೆ ಮಾರ್ಗಗಳಿಂದ ಬಿಬಿಎಂಪಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದೆವು. ಆದರೆ, ನಿನ್ನೆ ಬಿಬಿಎಂಪಿ ಕಚೇರಿಯ ಆವರಣದಲ್ಲಿ 100 ಮೀಟರ್ ದೂರದಲ್ಲಿ ಹಾಕಿದ್ದ ಬ್ಯಾರಿಕೇಡ್ ಅನ್ನು ತಳ್ಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಕುಸುಮಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಕುಸುಮಾ ಅವರ ಜತೆ ನಾನೂ ಇದ್ದೆ, ಸಿದ್ದರಾಮಯ್ಯನವರೂ ಇದ್ದರು. ನಮ್ಮ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದರು.

ದುರುದ್ದೇಶಪೂರ್ವಕ: ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರುಗಳು ಮೆರವಣಿಗೆ ಮಾಡಿಕೊಂಡು ಬ್ಯಾರಿಕೇಡ್ ದಾಟಿ ಒಳಗೆ ಬಂದಿಲ್ಲವೇ? ನಿಯಮ ಮೀರಿ ಮಂತ್ರಿಗಳು, ಉಪಮುಖ್ಯಮಂತ್ರಿಗಳು ತಮ್ಮ ಬೆಂಬಲಿಗರೊಂದಿಗೆ ಎಲ್ಲಿಯವರೆಗೆ ಬಂದಿದ್ದರು ಎಂಬುದಕ್ಕೆ ಅಲ್ಲೇ ಇದ್ದ ಮಾಧ್ಯಮಗಳು ಸಾಕ್ಷಿಯಾಗಿವೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸದೆ ಕೇವಲ ಕುಸುಮಾ ಅವರ ವಿರುದ್ಧ ಮಾತ್ರ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಇದು ದುರುದ್ದೇಶಪೂರ್ವಕವಾಗಿ ಕೈಗೊಂಡ ಕೃತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಬಿಜೆಪಿ ಕಾರ್ಯಕರ್ತರ ಮೇಲೆ 1,100 ಕೇಸು ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ 400, ಜೆಡಿಎಸ್ ಕಾರ್ಯಕರ್ತರ ಮೇಲೂ 200 ಕೇಸು ಹಾಕಿದ್ದಾರೆ. ಮುನಿರತ್ನ ನಮ್ಮ ಶಾಸಕರಾಗಿದ್ದಾಗಲೇ ಕೇಸು ಹಾಕಿಸಿದ್ದಾರೆ ಎಂದರು.

ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಇಷ್ಟು ಕೇಸು ಹಾಕಿಸಿದ್ದಾರೆ. ಅಲ್ಲಿ ಯಾರು ಬಂದಿದ್ದರೋ ಅವರ ವಿವರದ ಸಾಕ್ಷಿ ನಮ್ಮ ಬಳಿ ಇದೆ. ಒಬ್ಬ ಹೆಣ್ಣು ಮಗಳ ಮೇಲೆ ಏಕೆ ಕೇಸು ಹಾಕಬೇಕು? ಹೆಣ್ಣುಮಗಳನ್ನು ಧೃತಿಗೆಡಿಸುವ ಈ ಯತ್ನ ಸಣ್ಣತನದ ರಾಜಕಾರಣಕ್ಕೆ ಸಾಕ್ಷಿ. ಇದಕ್ಕೆ ನಾವು ಹೆದರಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದು ಶಿವಕುಮಾರ್ ಎಚ್ಚರಿಸಿದರು.

ನಾವು ಜಾಮೀನು ಪಡೆಯುತ್ತೇವೆ, ಹೆದರುತ್ತೇವೆ ಎಂದುಕೊಂಡರೆ ಅದು ಭ್ರಮೆ. ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು, ಅವರನ್ನು ಹೆದರಿಸಿ, ತಡೆಯಲು ಇಂಥದ್ದೊಂದು ಪ್ರಕರಣ ದಾಖಲಿಸಲಾಗಿದೆ. ನಮ್ಮ ಅಭ್ಯರ್ಥಿ ಮೇಲೆ ಸುಳ್ಳು ಕೇಸು ಹಾಕಿದ ಸರ್ಕಲ್ ಇನ್ಸ್‍ಪೆಕ್ಟರ್ ವರ್ಗಾವಣೆ ಆಗಬೇಕು. ನಾವು ಬೆಳೆಸಿದ ವ್ಯಕ್ತಿ ಈಗ ಬಿಜೆಪಿ ಅಭ್ಯರ್ಥಿ. ಆತನನ್ನು ಬೆಳೆಸಿದ್ದಕ್ಕೆ ನಾವು, ಬಿಜೆಪಿ, ಜೆಡಿಎಸ್‍ನವರು ಪಶ್ಚಾತಾಪ ಪಡುತ್ತಿದ್ದೇವೆ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ.

ನಿನ್ನೆ ಬಿಬಿಎಂಪಿ ಕಚೇರಿ ಬಳಿಯ ಎಲ್ಲ ಬೆಳವಣಿಗೆಗಳ ಡ್ರೋಣ್ ವೀಡಿಯೋ ಚಿತ್ರಣದ ಮಾಹಿತಿ ಪಡೆದಿದ್ದೇವೆ. ಅಧಿಕಾರಿಗಳನ್ನು ಬಳಸಿಕೊಂಡು ಹೇಡಿ ರಾಜಕಾರಣ ಮಾಡುತ್ತಿರುವ ಸರಕಾರ ಕೈಗೆ ಬಳೆ ತೊಟ್ಟುಕೊಳ್ಳಬೇಕೆಂದು ಲೇವಡಿ ಮಾಡಿದರು.

ನಮ್ಮ ತತ್ವ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರವಲ್ಲ, ನಮ್ಮ ಪಕ್ಷದ ತತ್ವ, ಸಿದ್ಧಾಂತ, ನಾಯಕತ್ವ ಒಪ್ಪಿ ಬೇಷರತ್ತಾಗಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಶಿವಕುಮಾರ್, ಮಾಧ್ಯಮಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಪೊಲೀಸ್ ಆಯುಕ್ತರು ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಡಿ.ಜೆ.ಹಳ್ಳಿ ಘಟನೆಯಲ್ಲೂ ನಮ್ಮವರು ಭಾಗಿಯಾಗಿಲ್ಲ. ನಾವು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಪ್ರತಿಯೊಬ್ಬ ಕಾಂಗ್ರೆಸ್ ವ್ಯಕ್ತಿ ಪ್ರಾಮಾಣಿಕರು, ಅಮಾಯಕರಾಗಿದ್ದು, ಅವರ ಪರವಾಗಿ ನಿಲ್ಲುತ್ತೇನೆ

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News