ರಿಪಬ್ಲಿಕ್ ಚಾನೆಲ್ ನೇರವಾಗಿ ತಮಗೆ ಹಣ ಪಾವತಿಸಿದೆ: ಸಾಕ್ಷಿಯಿಂದ ಬಹಿರಂಗ

Update: 2020-10-16 05:23 GMT
ಪರಂಬೀರ್ ಸಿಂಗ್

ಮುಂಬೈ: ಸದಾ ಟಿವಿ ಚಾನಲ್ ಆನ್ ಇಡುವ ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸುವ ಸಲುವಾಗಿ ಎರಡು ಟಿವಿ ಚಾನಲ್‌ಗಳು ನೇರವಾಗಿ ತಮಗೆ ಹಣ ಪಾವತಿಸಿವೆ ಎಂದು ನಾಲ್ಕು ಮಂದಿ ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷಿ ನುಡಿದಿದ್ದಾರೆ ಎಂದು ಟಿಆರ್‌ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಾನಲ್‌ಗಳ ವಿರುದ್ಧದ ಪ್ರಕರಣಗಳಲ್ಲಿ ಇವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಿಪಬ್ಲಿಕ್ ಚಾನಲ್ ನೇರವಾಗಿ ತಮಗೆ ಹಣ ಪಾವತಿಸಿದೆ ಎಂದು ಮೂರು ಮಂದಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದು, ಬಾಕ್ಸ್ ಸಿನಿಮಾ ಚಾನಲ್ ವಿರುದ್ಧ ಒಬ್ಬರು ಅಂಥದ್ದೇ ಆರೋಪ ಮಾಡಿದ್ದಾರೆ. ವೀಕ್ಷಕರ ಸಂಖ್ಯೆಯ ರಿಗ್ಗಿಂಗ್‌ನಲ್ಲಿ ರಿಪಬ್ಲಿಕ್ ಚಾನಲ್‌ನ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಈ ಮೂವರು ಸಾಕ್ಷಿಗಳು ಸ್ಪಷ್ಟಪಡಿಸಿದ್ದಾಗಿ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಹೇಳಿದ್ದಾರೆ. ತನಿಖೆ ಈಗ ಪ್ರಮುಖ ಹಂತದಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದರೆ ತನಿಖೆಗೆ ಧಕ್ಕೆಯಾಗಬಹುದು ಎಂದು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ವೀಕ್ಷಕರ ಸಂಖ್ಯೆಯ ರಿಗ್ಗಿಂಗ್‌ನಲ್ಲಿ ರಿಪಬ್ಲಿಕ್ ಟಿವಿ, ಬಾಕ್ಸ್ ಸಿನಿಮಾ ಮತ್ತು ಫ್ಯಾಕ್ಟ್ ಮರಾಠಿ ಶಾಮೀಲಾಗಿವೆ ಎಂಬ ಆರೋಪದ ಬಗ್ಗೆ ಕ್ರೈಂಬ್ರಾಂಚ್ ತನಿಖೆ ನಡೆಸುತ್ತಿದೆ. ಅಪರಾಧ ದಂಡಸಂಹಿತೆಯ ಸೆಕ್ಷನ್ 164ರ ಅನ್ವಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News