ಟಿಆರ್‌ಪಿ ಬೆನ್ನುಹತ್ತಿ ವೀಕ್ಷಕನ ಬೆನ್ನಿಗೆ ಚೂರಿ ಹಾಕಿದ ಸುದ್ದಿ ವಾಹಿನಿಗಳು

Update: 2020-10-17 04:50 GMT

ಸದ್ಯದ ದಿನಗಳಲ್ಲಿ ಸುದ್ದಿಗಳ ಗುರಿ ಮನರಂಜಿಸುವುದಾಗಿದೆ. ಆದುದರಿಂದ, ಪ್ರಸಾರ ಮಾಡುವ ಸುದ್ದಿಗಳು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ಮುಖ್ಯವಾಗದೆ, ಎಷ್ಟರಮಟ್ಟಿಗೆ ಜನರನ್ನು ರಂಜಿಸುತ್ತವೆ, ಹಿಡಿದಿಡುತ್ತವೆ? ಎನ್ನುವುದಷ್ಟೇ ಮುಖ್ಯವಾಗಿವೆ. ‘ಟಿಆರ್‌ಪಿ’ಯ ಬೆನ್ನು ಹತ್ತಿರುವ ಟಿವಿ ವಾಹಿನಿಗಳು ಜನರನ್ನು ಆಕರ್ಷಿಸುವುದಕ್ಕಾಗಿ ಪತ್ರಿಕಾಧರ್ಮದ ಸರ್ವ ವೌಲ್ಯಗಳನ್ನೂ ಗಾಳಿಗೆ ತೂರಿವೆ. ಸುದ್ದಿಗಳ ವೈಭವೀಕರಣ, ತಿರುಚುವಿಕೆ...ಹೀಗೆ ಯಾವ ಮಾರ್ಗದಲ್ಲಾದರೂ ಸರಿ, ವೀಕ್ಷಕರನ್ನು ಸದಾ ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಎನ್ನುವ ಏಕೈಕ ಉದ್ದೇಶವನ್ನು ಅವು ಹೊಂದಿವೆ. ತಾವು ಪ್ರಸಾರ ಮಾಡುತ್ತಿರುವ ಸುದ್ದಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅವು ಯಾವ ಕಾಳಜಿಯನ್ನೂ ಹೊಂದಿಲ್ಲ. ಗಾಂಜಾ, ಡ್ರಗ್ಸ್‌ಗಳನ್ನು ಮಾರುವವರಿಗೇ ಪೈಪೋಟಿ ನೀಡುತ್ತಿವೆ ಸುದ್ದಿ ವಾಹಿನಿಗಳು. ಗಾಂಜಾ ಮಾರಾಟಗಾರರಲ್ಲೂ ಒಂದು ಸಣ್ಣ ನಿಯತ್ತಿರುತ್ತದೆ. ಸುದ್ದಿ ವಾಹಿನಿಗಳು ಇದೀಗ ಆ ನಿಯತ್ತನ್ನೂ ಕಳೆದುಕೊಂಡಿವೆೆ ಎನ್ನುವುದು ಟಿಆರ್‌ಪಿಗಾಗಿ ಅವು ನಡೆಸಿದ ಇನ್ನಷ್ಟು ಗೋಲ್‌ಮಾಲ್‌ಗಳಿಂದ ಬಯಲಾಗಿದೆ.

ಟಿಆರ್‌ಪಿ ತನ್ನದಾಗಿಸುವುದಕ್ಕಾಗಿ ಸುಳ್ಳು ಸುದ್ದಿಗಳನ್ನು, ಪ್ರಚೋದಕ ಸುದ್ದಿಗಳನ್ನು ನೀಡುತ್ತಿರುವ ವಾಹಿನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಪ್ರೇಕ್ಷಕರನ್ನು ಸೃಷ್ಟಿಸುವ ಮೂಲಕ ತನ್ನ ಅಳಿದುಳಿದ ಬಟ್ಟೆಗಳನ್ನು ಕಳಚಿಕೊಂಡು ಬೆತ್ತಲಾಗಿವೆ. ರಿಪಬ್ಲಿಕ್ ಟಿವಿ ಸೇರಿದಂತೆ ಕೆಲವು ಸುದ್ದಿವಾಹಿನಿಗಳು ತಮ್ಮ ಟಿಆರ್‌ಪಿಯನ್ನು ಹೆಚ್ಚಿಸಲು ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿವೆ ಎಂಬ ಆರೋಪ ತೀವ್ರ ಚರ್ಚೆಯಲ್ಲಿದೆ. ಪರಿಣಾಮವಾಗಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್, ಇದೀಗ ಸುದ್ದಿವಾಹಿನಿಗಳಿಗೆ ನೀಡುವ ರೇಟಿಂಗ್‌ನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇಷ್ಟಕ್ಕೂ ಟಿಆರ್‌ಪಿ ಅಂದರೇನು? ಅದನ್ನು ಹೇಗೆ ಲೆಕ್ಕಹಾಕಲಾಗುತ್ತದೆ? ತಮ್ಮ ಟಿಆರ್‌ಪಿಯನ್ನು ಹೆಚ್ಚಿಸಲು ಸುದ್ದಿವಾಹಿನಿಗಳು ಆಗಾಗ ಯಾಕೆ ನೀತಿಗೆಟ್ಟ ವಿಧಾನಗಳನ್ನು ಅನುಸರಿಸುತ್ತಿವೆ? ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಸರಳವಾಗಿ ಹೇಳುವುದಾದರೆ ಟಿಆರ್‌ಪಿ ಎಂಬುದು ವಿವಿಧ ಸಾಮಾಜಿಕ- ಆರ್ಥಿಕ ಶ್ರೇಣಿಗಳಿಗೆ ಸೇರಿದ ಎಷ್ಟು ಸಂಖ್ಯೆಯ ಜನರು ಯಾವ ವಾಹಿನಿಯನ್ನು ಎಷ್ಟು ಸಮಯ ವೀಕ್ಷಿಸಿದರು ಎಂಬುದನ್ನು ಲೆಕ್ಕ ಹಾಕುವುದಾಗಿದೆ. ಈ ದತ್ತಾಂಶವನ್ನು ಸಾಮಾನ್ಯವಾಗಿ ಪ್ರತಿ ವಾರವೂ ಬಹಿರಂಗಪಡಿಸಲಾಗುತ್ತದೆ. ಕಳೆದ ವರ್ಷ ಭಾರತದ ಟಿವಿ ಉದ್ಯಮವು ಬರೋಬ್ಬರಿ 78,700 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿತ್ತು. ಟಿವಿ ವಾಹಿನಿಗಳ ಜನಪ್ರಿಯತೆಯನ್ನು ಅಳೆ  ಯುವ ಟಿಆರ್‌ಪಿಗಳ ಆಧಾರದ ಮೇಲೆ ವಿವಿಧ ವಾಣಿಜ್ಯ ಕಂಪೆನಿಗಳು ಟಿವಿಗಳಿಗೆ ಜಾಹೀರಾತನ್ನು ನೀಡುತ್ತವೆ. 1990ರ ಆರಂಭದಲ್ಲಿ ಆರ್ಥಿಕತೆಯ ಉದಾರೀಕರಣದ ಬಳಿಕ ಕಾರ್ಪೊರೇಟ್ ವಲಯಗಳಿಂದ ದೊರೆಯುವ ಜಾಹೀ ರಾತುಗಳು ಟಿವಿ ವಾಹಿನಿಗಳ ಜೀವಾಳವಾಗಿರುವುದರಿಂದ, ಟಿಆರ್‌ಪಿಗಾಗಿ ಹಂತಹಂತವಾಗಿ ಪತ್ರಿಕೋದ್ಯಮದ ಘನತೆಯನ್ನು, ವೌಲ್ಯವನ್ನು ವಾಹಿನಿಗಳು ಕೈ ಚೆಲ್ಲುತ್ತಾ ಬಂದವು.

ಟಿಆರ್‌ಪಿ ಹೆಚ್ಚಾದಷ್ಟು ಟಿವಿ ವಾಹಿನಿಗಳಿಗೆ ದೊರೆಯುವ ಆದಾಯವೂ ಅಧಿಕವಾಗುತ್ತದೆ. ಈ ಕಾರಣದಿಂದಾಗಿಯೇ ಭಾರತದ ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು ಓದುಗರು ಅಥವಾ ವೀಕ್ಷಕರ ಬದಲಿಗೆ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಾ ಬರುತ್ತಿವೆ. ಭಾರತದಲ್ಲಿ ಟಿವಿ ಕಾರ್ಯಕ್ರಮಗಳ ವೀಕ್ಷಣೆಯ ರ್ಯಾಂಕಿಂಗ್ ಅನ್ನು ಲೆಕ್ಕಹಾಕುವ ಹೊಣೆಗಾರಿಕೆಯನ್ನು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್‌ಸಿ) ಎಂಬ ಸಂಸ್ಥೆಗೆ ವಹಿಸಲಾಗಿದೆ. ಬಿಎಆರ್‌ಸಿಯು ವಿವಿಧ ಆರ್ಥಿಕ ಹಾಗೂ ಸಾಮಾಜಿಕ ಸ್ತರಗಳಿಗೆ ಸೇರಿದ 45 ಸಾವಿರಕ್ಕೂ ಅಧಿಕ ಮನೆಗಳಲ್ಲಿ ‘ಬ್ಯಾರೋ ಮೀಟರ್’ ಎಂಬ ಉಪಕರಣಗಳನ್ನು ಅವರ ಅರಿವಿಗೆ ಬಾರದಂತೆ ಗುಪ್ತವಾಗಿ ಅಳವಡಿಸಿರುತ್ತದೆ. ಆ ಮೂಲಕ ಆಯಾ ಕುಟುಂಬಗಳು ಯಾವ ವಾಹಿನಿಯ ಟಿವಿ ಕಾರ್ಯಕ್ರಮವನ್ನು ಎಷ್ಟು ಸಮಯದವರೆಗೆ ವೀಕ್ಷಿಸುತ್ತವೆೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳುತ್ತದೆ.

ಆದರೆ ಕೆಲವು ಟಿವಿ ವಾಹಿನಿಗಳು ಈ ಬ್ಯಾರೋಮೀಟರ್‌ಗಳಿರುವ ಮನೆಗಳನ್ನು ಅಕ್ರಮ ವಿಧಾನಗಳ ಮೂಲಕ ಪತ್ತೆ ಹಚ್ಚಿವೆ . ಆನಂತರ ಆ ಮನೆಗಳವರನ್ನು ಸಂಪರ್ಕಿಸಿ ನಿರ್ದಿಷ್ಟ ಟಿವಿವಾಹಿನಿಯನ್ನು ವೀಕ್ಷಿಸುವಂತೆ ಮಾಡಲು ಅವರಿಗೆ ಲಂಚ ನೀಡುತ್ತವೆ. ಅಲ್ಲದೆ ಅವರು ಮನೆಯಲ್ಲಿ ಇರಲಿ, ಇಲ್ಲದೇ ಇರಲಿ ನಿರ್ದಿಷ್ಟ ಟಿವಿ ವಾಹಿನಿಯನ್ನೇ ಆನ್ ಮಾಡಿ ಇರುವಂತೆಯೂ ಸೂಚಿಸುತ್ತವೆ. ಇದಕ್ಕಾಗಿ ಆ ಜನರಿಗೆ 500-600 ರೂ. ಮಾಸಿಕ ಲಂಚ ನೀಡಲಾಗುತ್ತಿತ್ತೆಂದು ಮುಂಬೈ ಪೊಲೀಸ್ ವರಿಷ್ಠರು ಆಪಾದಿಸಿದ್ದಾರೆ.ಬ್ಯಾರೋಮೀಟರ್‌ಗಳನ್ನು ಲೆಕ್ಕಹಾಕಲು ಬಿಎಆರ್‌ಸಿ ಗುತ್ತಿಗೆ ನೀಡಿದ್ದ ಸಂಸ್ಥೆಯಾದ ಹನ್ಸಾ , ಮುಂಬೈ ಪೊಲೀಸರಿಗೆ ದೂರು ನೀಡಿದ ಬಳಿಕ ಟಿಆರ್‌ಪಿ ಹಗರಣ ಬಯಲಿಗೆ ಬಂದಿತ್ತು.

ಬಿಎಆರ್‌ಸಿ ಹಾಗೂ ಕೆಲವು ಟಿವಿ ವಾಹಿನಿಗಳ ಸಂಪೂರ್ಣ ಸಹಕಾರದೊಂದಿಗೆ ಅಕ್ರಮವಾಗಿ ಟಿಆರ್‌ಪಿ ರ್ಯಾಂಕಿಂಗ್ ಪಡೆಯಲಾಗುತ್ತಿದೆ ಎಂದು ‘ಇಂಡಿಯಾ ಟಿವಿ’ ಈ ಹಿಂದೆಯೇ ಆರೋಪಿಸಿತ್ತು. ದೂರದರ್ಶನದ ವೀಕ್ಷಕ ವರ್ಗವನ್ನು ಟಿಆರ್‌ಪಿ ರೇಟಿಂಗ್‌ನಲ್ಲಿ ಕಡಿಮೆಯಾಗಿ ತೋರಿಸಲಾಗುತ್ತಿರುವ ಬಗ್ಗೆ ಎರಡು ವರ್ಷಗಳ ಹಿಂದೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು.ಟಿಆರ್‌ಪಿ ಹಗರಣದ ಬಗ್ಗೆ ದೇಶದ ಪ್ರಮುಖ ಸುದ್ದಿಪತ್ರಿಕೆಗಳು ವರದಿ ಮಾಡಿವೆಯಾದರೂ, ಈ ವಿಷಯದ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಆಸಕ್ತಿ ತೋರಿಸುತ್ತಿಲ್ಲ. ದೇಶದ ಯಾವುದೇ ಪ್ರಮುಖ ಆಂಗ್ಲ ಅಥವಾ ಹಿಂದಿ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ರಿಪಬ್ಲಿಕ್ ಟಿವಿಯ ಟಿಆರ್‌ಪಿ ಹಗರಣದ ಪ್ರಸ್ತಾಪವಾಗಲೇ ಇಲ್ಲ. ಮಾಧ್ಯಮಗಳು ಟಿಆರ್‌ಪಿಗಾಗಿ ತನ್ನ ವೃತ್ತಿಧರ್ಮದ ವೌಲ್ಯಗಳನ್ನು ಕೈ ಬಿಟ್ಟಿವೆ ಎನ್ನುವುದು ಚರ್ಚೆಯಲ್ಲಿರುವಾಗಲೇ, ಕೃತಕ ಪ್ರೇಕ್ಷಕರನ್ನು ಸೃಷ್ಟಿಸುವ ಮೂಲಕ ಜಾಹೀರಾತುದಾರರನ್ನು ಮತ್ತು ಪ್ರೇಕ್ಷಕ ವರ್ಗವನ್ನು ಎರಡೆರಡು ಬಗೆಯಲ್ಲಿ ವಂಚಿಸಿರುವುದು ಆಘಾತಕಾರಿ ಅಂಶವಾಗಿದೆ. ಮಾಧ್ಯಮಗಳು ಸಮಾಜದ ಕನ್ನಡಿ ಎಂದು ಹೇಳುತ್ತಾರೆ. ಆದರೆ ಇಂದು ಅವುಗಳು ಸ್ವತಃ ವಿರೂಪಗೊಂಡಿವೆೆ.

ಈ ಒಡೆದ ಕನ್ನಡಿಯಲ್ಲಿ ಸಮಾಜವಾದರೂ ಹೇಗೆ ತನ್ನ ಮುಖವನ್ನು ನೋಡಿಕೊಳ್ಳಬಹುದು? ದೇಶ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳೂ ಅದರ ಜೊತೆಗೆ ಹಿಂದಕ್ಕೆ ಹೆಜ್ಜೆಯಿಟ್ಟಿರುವುದು ಭಾರತದ ಅತಿ ದೊಡ್ಡ ಸೋಲಾಗಿದೆ. ಅಥವಾ ಮಾಧ್ಯಮಗಳು ವೌಲ್ಯಗಳನ್ನು ಕಳೆದುಕೊಂಡ ಕಾರಣಗಳಿಂದಲೇ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳು ಕುಲಗೆಟ್ಟವೇನೋ. ತಾನೇ ಒಳಗೊಳಗೆ ಕೊಳೆತು ನಾರುತ್ತಿರುವಾಗ, ಸಮಾಜದ ಕೊಳಕನ್ನು ಈ ಮಾಧ್ಯಮಗಳು ಹೇಗೆ ಶುಚಿಗೊಳಿಸೀತು? ದುಡ್ಡು ಸಂಪಾದನೆ ಮತ್ತು ಜನವಿರೋಧಿ ರಾಜಕೀಯ ಚಿಂತನೆಗಳನ್ನು ಜಾರಿಗೊಳಿಸುವ ಗುಪ್ತ ಅಜೆಂಡಾಗಳೇ ಟಿವಿವಾಹಿನಿಗಳನ್ನು ಈ ಸ್ಥಿತಿಗೆ ತಂದು ನಿಲ್ಲಿಸಿವೆ.

ಕಳೆದು ಹೋಗಿರುವ ತನ್ನ ನ್ಯಾಯಪರತೆಯ ವರ್ಚಸ್ಸನ್ನು ಮರಳಿ ಪಡೆಯಬೇಕಾದರೆ ಮಾಧ್ಯಮಗಳು ಜನತೆಯ ಕಾರ್ಯಸೂಚಿಯೆಡೆಗೆ ಮರಳಬೇಕಾಗಿದೆ ಹಾಗೂ ಶ್ರೀಸಾಮಾನ್ಯನ ದೃಷ್ಟಿಕೋನದೊಂದಿಗೆ ಅವು ಮಾತನಾಡುವುದನ್ನು ಆರಂಭಿಸಬೇಕಾಗಿದೆ. ಆದರೆ ಅದು ಸಾಧ್ಯವಾಗಬೇಕಾದರೆ ಜನರೂ ಜಾಗೃತರಾಗಬೇಕಾಗಿದೆ. ಮಾಧ್ಯಮ ಯಾವಾಗ ವೀಕ್ಷಕರ ಕಣ್ಗಾವಲಲ್ಲಿ ಮುಂದುವರಿಯುತ್ತದೆಯೋ, ಆಗ ಟಿಆರ್‌ಪಿಯ ಹಂಗಿಲ್ಲದೆ ಸ್ವತಂತ್ರವಾಗಿ ಮಾಧ್ಯಮಗಳು ಕೆಲಸ ಮಾಡುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ, ತಮ್ಮನ್ನು ಈವರೆಗೆ ಮೋಸ ಮಾಡಿ ಬದುಕುತ್ತಿದ್ದ ಮಾಧ್ಯಮಗಳ ವಿರುದ್ಧ ಜನರು ಜಾಗೃತರಾಗಬೇಕಾಗಿದೆ. ಸಮಾಜವನ್ನು ತಿದ್ದಬೇಕಾದ ಮಾಧ್ಯಮಗಳನ್ನು ತಿದ್ದುವುದು ದೇಶದ ಭವಿಷ್ಯದ ದೃಷ್ಟಿಯಿಂದ ಆಗಬೇಕಾದ ಅತಿ ಮುಖ್ಯ ಕೆಲಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News