ಕೋವಿಡ್-19: ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅಲೆ ಆರಂಭ

Update: 2020-10-19 05:12 GMT

ಹೊಸದಿಲ್ಲಿ, ಅ.19: ಜಾಗತಿಕ ಮಟ್ಟದಲ್ಲಿ ಒಟ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 40 ದಶಲಕ್ಷದ ಗಡಿ ದಾಟಿದ್ದು, ಇದೀಗ ಇದುವರೆಗಿನ ಅತ್ಯಂತ ಪ್ರಬಲ ಹಾಗೂ ನಾಲ್ಕನೇ ಅಲೆ ಆರಂಭವಾಗಿದೆ. ಯೂರೋಪಿಯನ್ ದೇಶಗಳಲ್ಲಿ ಎರಡನೇ ಅಲೆ ಕಂಡುಬಂದಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅಮೆರಿಕದಲ್ಲಿ ಮೂರನೇ ಅಲೆ ಕಂಡುಬಂದಿದ್ದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮೊದಲನೇ ಅಲೆ ಮುಕ್ತಾಯದ ಹಂತಕ್ಕೆ ಬಂದಿದೆ.

ಚೀನಾದಲ್ಲಿ 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ಹರಡಿದ್ದು, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಫೆಬ್ರವರಿಯೊಳಗೆ ಮೊದಲ ಅಲೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಅಲೆ ಮಾರ್ಚ್ ತಿಂಗಳಲ್ಲಿ ಯೂರೋಪ್‌ನಲ್ಲಿ ಕಂಡುಬಂದಿದೆ. ಇಟೆಲಿ, ಸ್ಪೇನ್, ಬ್ರಿಟನ್ ಹಾಗೂ ಜರ್ಮನಿ ಹಾಟ್‌ಸ್ಪಾರ್ಟ್‌ಗಳಾಗಿದ್ದವು. ಮೇ ವೇಳೆಗೆ ಮಾರಕ ವೈರಸ್ ಅಮೆರಿಕದಲ್ಲಿ ವ್ಯಾಪಕವಾಗಿದ್ದು, ಇದು ಮೂರನೇ ಅಲೆ. ಆಗಸ್ಟ್ ಮತ್ತು ಸೆಪ್ಟಂಬರ್ ವೇಳೆಗೆ ಇದು ಕಡಿಮೆಯಾದರೂ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಹಾಗೂ ಬ್ರೆಝಿಲ್‌ನಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಆಗಸ್ಟ್‌ನಲ್ಲಿ ಭಾರತ ಇಡೀ ಜಗತ್ತಿನಲ್ಲಿ ಕೋವಿಡ್-19 ಕೇಂದ್ರಬಿಂದುವಾಗಿತ್ತು.

ಮೂರನೇ ಅಲೆ ಅಮೆರಿಕದಿಂದ ಆರಂಭವಾಗಿದ್ದು, ಕಳೆದ ಒಂದು ವಾರದಲ್ಲಿ ಅಮೆರಿಕದ ದೈನಿಕ ಸರಾಸರಿ 55,917 ಪ್ರಕರಣಗಳನ್ನು ಕಂಡಿದೆ. ಆಗಸ್ಟ್‌ನಿಂದೀಚೆಗೆ ಇದು ದೇಶದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಎರಡನೇ ಅಲೆಯಲ್ಲಿ ಅತ್ಯಧಿಕ ಸಾವು ನೋವು ಸಂಭವಿಸಿದ ಫ್ಲೋರಿಡಾ, ಟೆಕ್ಸಸ್ ಮತ್ತ ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಮೂರನೇ ಅಲೆಯಲ್ಲೂ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿವೆ. ಮೂರನೇ ಅಲೆ ಎರಡನೇ ಅಲೆಯ ಗರಿಷ್ಠ ಮಟ್ಟವನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮೊದಲ ಅಲೆಗಿಂತ ಎರಡನೇ ಅಲೆ ಪ್ರಬಲವಾಗಿರುವ ಯೂರೋಪ್‌ನಲ್ಲಿ ಕಳೆದ ಶುಕ್ರವಾರ ಮೊಟ್ಟಮೊದಲ ಬಾರಿಗೆ 1.50 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ರಶ್ಯ, ಫ್ರಾನ್ಸ್, ಸ್ಪೇನ್ ಹಾಗೂ ಬ್ರಿಟನ್‌ನಲ್ಲಿ ಎರಡನೇ ಅಲೆಯಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಅಲೆಯ ಹಿನ್ನೆಲೆಯಲ್ಲಿ ಹಲವು ದೇಶಗಳು ಈಗಾಗಲೇ ಸಂಚಾರ ನಿರ್ಬಂಧ ವಿಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News