ಬೆಂಗಳೂರಿನಲ್ಲಿ ವರುಣನ ಆರ್ಭಟ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

Update: 2020-10-19 11:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.19: ನಗರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ಮೆಜೆಸ್ಟಿಕ್, ಆರ್.ಆರ್.ನಗರ, ಮಲ್ಲತ್ತಹಳ್ಳಿ, ಕದಂಬ ಲೇಔಟ್‍ನ ಕಲಾ ಗ್ರಾಮ ಸೇರಿದಂತೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರವಿವಾರ ತಡರಾತ್ರಿಯಿಂದ ಶುರುವಾದ ಮಳೆಯ ಆರ್ಭಟಕ್ಕೆ ವಾಹನ ಸವಾರರು ಮನೆಗಳಿಗೆ ತೆರಳಲು ರಾತ್ರಿಯಿಡಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ರಾತ್ರಿಯಿಡಿ ಸುರಿದ ಮಳೆಗೆ ಮಲ್ಲತಹಳ್ಳಿ ಸಮೀಪದ ಕದಂಬ ಬಡಾವಣೆ ಸಂಪೂರ್ಣ ಜಲಾವೃತಗೊಂಡಿತ್ತು.

ಅಲ್ಲದೇ ನಗರದ ತಗ್ಗು ಪ್ರದೇಶದಲ್ಲಿರುವ ಬಡಾವಣೆಯ ಬಹುತೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು. ಕೆಲ ಪ್ರದೇಶಗಳಲ್ಲಿ ಹಲವಾರು ಮರಗಳು ಧರೆಗುರುಳಿ ಬಿದ್ದಿವೆ.

ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದರೂ ಬಿಬಿಎಂಪಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಮೈಸೂರು ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದ ಪರಿಣಾಮ ವಾಹನ ಸವಾರರಿಗೆ ರಸ್ತೆ ಕಾಣದೆ ಪರದಾಡಿದರು. ಅಕ್ಕಪಕ್ಕದ ರಾಜಕಾಲುವೆಗಳು ತುಂಬಿದ ಪರಿಣಾಮ ಮೋರಿ ನೀರೆಲ್ಲಾ ರಸ್ತೆಗೆ ಹರಿದು ಅವಾಂತರ ಸೃಷ್ಟಿಯಾಯಿತು. ರಾಜರಾಜೇಶ್ವರಿ ನಗರದ ಆರ್ಚ್ ರಸ್ತೆ ನೀರಿನಿಂದ ಮುಳುಗಿ ಹೋಗಿದ್ದು, ಸಂಚಾರ ಪೊಲೀಸರು ರಸ್ತೆ ಮೇಲಿನ ನೀರನ್ನು ಹೊರ ಹಾಕುವಲ್ಲಿ ಹೈರಾಣಾಗಿ ಹೋದರು.

ಮಾರುಕಟ್ಟೆ, ಶಾಂತಿನಗರ, ಆರ್.ಆರ್.ನಗರ, ಕೋರಮಂಗಲ, ಮೆಜೆಸ್ಟಿಕ್, ವಿಜಯನಗರ, ಜಯನಗರ, ರಾಜಾಜಿನಗರ ಮತ್ತಿತರ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದ್ದು, ಕೆಲಸ ಕಾರ್ಯಗಳಿಗೆ ತೆರಳಲು ನಾಗರಿಕರು ಪರದಾಡಿದರು. ಇಂದು ಕೂಡ ನಗರಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಜನ ಆತಂಕಕ್ಕೀಡಾಗಿದ್ದಾರೆ. 

ತರಕಾರಿ ಲಾರಿ ಪಲ್ಟಿ: ಮಳೆಯಿಂದ ರಸ್ತೆ ಪೂರ್ತಿ ನೀರಿನಿಂದ ತೊಯ್ದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹುಳಿಮಾವು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News