ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ಅ.20ರಂದು ಪ್ರಿಯಾಂಕ ಆಳ್ವ ವಿಚಾರಣೆ ಸಾಧ್ಯತೆ

Update: 2020-10-19 11:09 GMT

ಬೆಂಗಳೂರು, ಅ.19:ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರನೆ ಆರೋಪಿ ಆದಿತ್ಯ ಆಳ್ವ ಸಹೋದರಿ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವ ವಿಚಾರಣೆಯನ್ನು ಅ.20ರಂದು ಸಿಸಿಬಿ ನಡೆಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಿಯಾಂಕಾ ಆಳ್ವ ಅವರಿಗೆ ಸಿಸಿಬಿ ಪೊಲೀಸರು, ಎರಡನೇ ಬಾರಿಗೆ ನೋಟಿಸ್ ನೀಡಲಾಗುತ್ತಿದ್ದು, ಅ.20ರಂದು ವಿಚಾರಣೆಗೆ ಹಾಜರಾಗದೇ ಹೋದರೆ ಸಿಸಿಬಿ ತನಿಖೆಗೆ ಸಹಕಾರ ನೀಡದೆ ಇರುವ ಆರೋಪದ ಮೇರೆಗೆ ಸಿಸಿಬಿ ಕಾನೂನು ರೀತಿಯಾದ ಕ್ರಮಕ್ಕೆ ಮುಂದಾಗಲಿದೆ.

ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಆದಿತ್ಯ ಆಳ್ವ ತನ್ನ ಸಹೋದರಿ ಪ್ರಿಯಾಂಕಾ ಆಳ್ವ ಮನೆಗೆ ತೆರಳಿರುವ ಮಾಹಿತಿ ಸಿಸಿಬಿ ಬಳಿ ಇದೆ. ಹಾಗಾಗಿಯೇ, ಸರ್ಚ್ ವಾರೆಂಟ್ ಪಡೆದು ತನಿಖಾಧಿಕಾರಿಗಳು ಮುಂಬೈನಲ್ಲಿರುವ ಪ್ರಿಯಾಂಕಾ ಮನೆ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದರು. 

ಇದೀಗ ಎರಡನೆ ಬಾರಿಗೆ ನೋಟಿಸ್‍ಗೆ ಸ್ಪಂದಿಸಿ ಪ್ರಿಯಾಂಕಾ ಆಳ್ವ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಬಹುದು ಎನ್ನಲಾಗಿದ್ದು, ಒಂದು ವೇಳೆ ಗೈರಾದರೆ, ಸಿಸಿಬಿ ಆಕೆಯ ಬಂಧನಕ್ಕೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪಾಲಿಗ್ರಾಫ್ ವಿಚಾರಣೆ ?
ಇದೇ ಪ್ರಕರಣದಲ್ಲಿ ಬಂಧನವಾಗಿರುವ ವಿರೇನ್ ಖನ್ನಾನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಿಸಿಬಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಇನ್ನೆರಡು ದಿನದಲ್ಲಿ ವಿರೇನ್ ಖನ್ನಾನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಪಡೆದು ಅಹಮದಾಬಾದಿನ ಎಫ್‍ಎಸ್‍ಎಲ್‍ನಲ್ಲಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಈ ಪರೀಕ್ಷೆಗೆ ಒಳಪಡಿಸುವ ಮೊದಲು ವಿರೇನ್ ಖನ್ನಾ ಒಪ್ಪಿಗೆ ಅಗತ್ಯವೂ ಇದೆ ಎಂದು ಹಿರಿಯ ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News