ಮಹಿಳಾ ಅಧಿಕಾರಿಯೊಬ್ಬರ ಕೈಕುಲುಕಲು ನಿರಾಕರಿಸಿದ್ದ ಮುಸ್ಲಿಂ ವೈದ್ಯನಿಗೆ ಜರ್ಮನಿ ಪ್ರಜೆಯಾಗುವ ಹಕ್ಕಿಲ್ಲ ಎಂದ ನ್ಯಾಯಾಲಯ

Update: 2020-10-19 14:04 GMT

ಬರ್ಲಿನ್: ತನಗೆ ಪೌರತ್ವ ಪ್ರಮಾಣಪತ್ರ ನೀಡಿದ ಮಹಿಳಾ ಅಧಿಕಾರಿಯೊಬ್ಬರ ಕೈಕುಲುಕಲು ನಿರಾಕರಿಸಿದ್ದ ಮುಸ್ಲಿಮ್ ವೈದ್ಯನಿಗೆ ಜರ್ಮನಿ ಪೌರತ್ವ ನಿರಾಕರಿಸಿದ ಅಧಿಕಾರಿಗಳ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. 

ನ್ಯಾಯಾಲಯದ ತೀರ್ಪಿನ ವಿರುದ್ಧ ವೈದ್ಯನಿಗೆ ಫೆಡರಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. 

39ರ ಹರೆಯದ ಲೆಬನಾನ್ ಪ್ರಜೆ ಜರ್ಮನಿಯಲ್ಲಿ 13 ವರ್ಷಗಳ ಕಾಲ ನೆಲೆಸಿದ್ದ ಹಿನ್ನೆಲೆಯಲ್ಲಿ ಜರ್ಮನಿ ಪ್ರಜೆಯಾಗುವ ಹಂತದಲ್ಲಿದ್ದರು. ವೈದ್ಯಕೀಯ ಅಧ್ಯಯನ ಮುಗಿಸಿದ್ದ ಅವರು ಗರಿಷ್ಠ ಅಂಕದೊಂದಿಗೆ ಪೌರತ್ವ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು. ಆದರೆ 2015ರಲ್ಲಿ ನಡೆದಿದ್ದ ಸಮಾರಂಭದಲ್ಲಿ ತನಗೆ ಪೌರತ್ವ ಪ್ರಮಾಣಪತ್ರ ನೀಡಿದ ಮಹಿಳಾ ಅಧಿಕಾರಿಯೊಬ್ಬರ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಅವರು ಕೊನೆಯ ಹಂತದಲ್ಲಿ ವಿಫಲರಾಗಿದ್ದರು. ಈ ಕಾರಣಕ್ಕೆ ರಾಜ್ಯದ ಪ್ರಮುಖ ಅಧಿಕಾರಿಗಳು ವೈದ್ಯನಿಗೆ ಪೌರತ್ವ ನಿರಾಕರಿಸಿದರು.
ಐದು ವರ್ಷಗಳ ಬಳಿಕ ನ್ಯಾಯಾಲಯವು ಅಧಿಕಾರಿಗಳ ನಿರ್ಧಾರವನ್ನು ಎತ್ತಿ ಹಿಡಿದಿದೆ . ವ್ಯಕ್ತಿಯ ಮೂಲಭೂತವಾದಿ ದೃಷ್ಟಿಕೋನಗಳು ಜರ್ಮನಿ ಸಮಾಜದ ಸಮಗ್ರತೆಗೆ ಅಡ್ಡಿಯಾಗಿದೆ. ಹಸ್ತಲಾಘವ ಘಟನೆಯು ಸಂವಿಧಾನ ಖಾತರಿ ನೀಡಿದ ಪುರುಷ ಹಾಗೂ ಮಹಿಳೆಯರ ಸಮಾನತೆ ಯೊಂದಿಗೆ ಹೊಂದಿಕೆ ಆಗುವುದಿಲ್ಲ ಎಂದು ಮ್ಯಾನ್ ಹೇಮ್ ನ್ಯಾಯಾಲಯ ಹೇಳಿದೆ.
2002ರಲ್ಲಿ ಜರ್ಮನಿಗೆ ತೆರಳಿದ್ದ ವೈದ್ಯ ಅಂದಿನಿಂದ ಅಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದರು. 10 ವರ್ಷಗಳ ಹಿಂದೆ ಸಿರಿಯಾದ ಮಹಿಳೆಯನ್ನು ವಿವಾಹವಾಗಿದ್ದರು.  2012ರಿಂದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News