ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪತ್ರ: ಬಂಧಿತ ಆರೋಪಿ ರಾಜಶೇಖರ್ ವಿರುದ್ಧ ಚರ್ಚ್ ಗೆ ಬೆಂಕಿ ಹಚ್ಚಿದ್ದ ಆರೋಪ

Update: 2020-10-20 16:40 GMT

ಬೆಂಗಳೂರು, ಅ.20: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಗರದ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ ಪ್ರಕರಣವನ್ನು ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು, ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಿಪಟೂರು ತಾಲೂಕಿನ ಲಿಂಗದಹಳ್ಳಿ ನಿವಾಸಿ ರಾಜಶೇಖರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಚರ್ಚ್‍ಗೆ ಬೆಂಕಿ ಹಚ್ಚಿದ್ದ ಪ್ರಕರಣ ಸೇರಿದಂತೆ ಇನ್ನಿತರೆ ಗಂಭೀರ ಮೊಕದ್ದಮೆಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಅ.19ರ ಸಂಜೆ 5 ಗಂಟೆ ಸುಮಾರಿಗೆ ಸಿಸಿಎಚ್ 33ನೇ ನ್ಯಾಯಾಧೀಶರಿಗೆ ಪತ್ರವೊಂದು ಬಂದಿದ್ದು, ಅದರಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ಡ್ರಗ್ಸ್ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ನೀಡಬೇಕು. ನಿಮಗೆ ಏನು ಬೇಕು ಕೇಳಿ, ಎಲ್ಲ ಕೊಡುತ್ತೇವೆ. ಅದನ್ನು ಬಿಟ್ಟು ಜಾಮೀನು ನಿರಾಕರಿಸಿದರೆ, ನಿಮ್ಮ ಕಾರಿನ ಇಂಜಿನ್‍ಗೆ ಬಾಂಬ್ ಇಟ್ಟು ಸ್ಪೋಟಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯ ಪಿಎಸ್ಸೈ ಮಲ್ಲಿಕಾರ್ಜುನ ಹಾಗೂ ಇನ್ನಿತರೆ ಸಿಬ್ಬಂದಿ ಒಳಗೊಂಡತೆ ತಂಡವೊಂದನ್ನು ರಚನೆ ಮಾಡಲಾಗಿತ್ತು.

ತದನಂತರ, ಪತ್ರದಲ್ಲಿನ ವಿಳಾಸದ ಅನ್ವಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ರಮೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಜಶೇಖರ್ ಈ ಕೃತ್ಯವೆಸಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ರಮೇಶ್ ಮತ್ತು ರಾಜಶೇಖರ್ ನಡುವೆ ಜಮೀನಿಗೆ ಸಂಬಂಧಪಟ್ಟಂತೆ ಗಲಾಟೆ ಇದ್ದ ಕಾರಣಕ್ಕಾಗಿಯೇ ಆರೋಪಿ ರಾಜಶೇಖರ್ ಈ ಬೆದರಿಕೆ ಪತ್ರ ಬರೆದು, ಜತೆಗೆ ರಮೇಶ್‍ನ ಚುನಾವಣೆ ಗುರುತಿನ ಚೀಟಿ ಇಟ್ಟು ರವಾನೆ ಮಾಡಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ.

ರಾಜಶೇಖರ್ ಮೇಲೆ ಹಲವು ಪ್ರಕರಣ

* 1993ನೇ ಸಾಲಿನಲ್ಲಿ ಕಾಪರ್ ವೈರ್ ಕಳವು ಪ್ರಕರಣದಡಿ ಇಲ್ಲಿನ ತಿಪಟೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು

* 2013ನೇ ಸಾಲಿನಲ್ಲಿ ಚರ್ಚ್‍ಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ ಮೊಕದ್ದಮೆ ದಾಖಲು

* 2019ನೇ ಸಾಲಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಂಬಂಧ ಮೊಕದ್ದಮೆ ದಾಖಲು

* 2020ನೇ ಸಾಲಿನಲ್ಲಿ ಜಾತಿ ನಿಂದನೆ ಆರೋಪ ಸಂಬಂಧ ಮೊಕದ್ದಮೆ ದಾಖಲು

* ಜಮೀನು ದಾಖಲಾತಿ ನಕಲು ಆರೋಪದಡಿ ಪ್ರಕರಣ ದಾಖಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News