ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ: ಆರೋಪಿ ಬಂಧನ

Update: 2020-10-20 12:04 GMT

ಬೆಂಗಳೂರು, ಅ.20: ಡೆಬಿಟ್ ಕಾರ್ಡುಗಳನ್ನು ಬದಲಾಯಿಸಿ ಹಣ ಪಡೆದು, ವಂಚಿಸುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಅರುಣ್ ಕುಮಾರ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಾಜು ಎಂಬುವವರು ಹೆಸರುಘಟ್ಟ ಮುಖ್ಯ ರಸ್ತೆಯ ತ್ರಿವೇಣಿ ಶಾಲೆಯ ಸಮೀಪ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೋಗಿದ್ದರು. ಈ ವೇಳೆ ಎಟಿಎಂ ಬಳಕೆ ತಿಳಿಯದೆ ನಾಗರಾಜು ಅವರು ಆರೋಪಿ ಅರುಣ್ ಸಹಾಯ ಕೇಳಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಅರುಣ್, ಅವರ ಡೆಬಿಟ್ ಕಾರ್ಡ್ ಬದಲಾಗಿ ಬೇರೊಂದು ಡೆಬಿಟ್ ಕಾರ್ಡ್ ನೀಡಿದ್ದು, ನಂತರ 3.20 ಲಕ್ಷ ರೂ. ಹಣ ಡ್ರಾ ಮಾಡಿದ್ದಾನೆ ಎನ್ನಲಾಗಿದೆ. 

ಬಳಿಕ ಪ್ರಕರಣದ ತನಿಖೆ ನಡೆಸಿ ಅರುಣ್ ನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ 2019ರಲ್ಲಿ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಹಾಗೆಯೇ ಸೈಬರ್ ಠಾಣೆಯಲ್ಲಿ ದಾಖಲಾದ ಒಟ್ಟು ನಾಲ್ಕು ಪ್ರಕರಣ ಬೇಧಿಸಿ ಬಂಧಿತ ಆರೋಪಿಯಿಂದ 1.6 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಫೋನ್, 3.7 ಗ್ರಾಂ ಚಿನ್ನಾಭರಣ, 1.13 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News