ಹತ್ರಸ್ 'ಅತ್ಯಾಚಾರ' ಕುರಿತಂತೆ ಪೊಲೀಸರ ಹೇಳಿಕೆಯನ್ನು ಅಲ್ಲಗಳೆದ ವೈದ್ಯನನ್ನು ಹುದ್ದೆಯಿಂದ ಕಿತ್ತು ಹಾಕಿದ ಎಎಂಯು

Update: 2020-10-20 13:11 GMT
Photo: thewire.in

ಹೊಸದಿಲ್ಲಿ : ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ  ಉತ್ತರ ಪ್ರದೇಶ  ಪೊಲೀಸರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದ ಆಲಿಘರ್ ಮುಸ್ಲಿಂ ವಿವಿಯ ಜವಾಹರಲಾಲ್ ನೆಹರು  ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಂಗಾಮಿ ಮುಖ್ಯ ವೈದ್ಯಾಧಿಕಾರಿ ಡಾ. ಅಝೀಂ ಮಲಿಕ್ ಅವರನ್ನು ಅವರ ಹುದ್ದೆಯಿಂದ ಕಿತ್ತು ಹಾಕಲಾಗಿದೆ ಎಂದು thewire.in ವರದಿ ಮಾಡಿದೆ.

ಹತ್ರಸ್ ಸಂತ್ರಸ್ತೆಯ ಫೊರೆನ್ಸಿಕ್ ವರದಿಯಲ್ಲಿ ಆಕೆಯ ದೇಹದಲ್ಲಿ ವೀರ್ಯಾಣು ಅಂಶ ಪತ್ತೆಯಾಗದೇ ಇರುವುದರಿಂದ ಅತ್ಯಾಚಾರ ನಡೆದಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದರು. ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದ  ಡಾ. ಅಝೀಮ್, ಘಟನೆ ನಡೆದು 11 ದಿನಗಳ ನಂತರ ಸಂಗ್ರಹಿಸಲಾದ ಮಾದರಿಯ ಆಧಾರದಲ್ಲಿ ನೀಡಲಾದ ವರದಿ ಪ್ರಯೋಜನವಿಲ್ಲ ಎಂದಿದ್ದರು.

"ಘಟನೆ ನಡೆದ 96 ಗಂಟೆಗಳ ತನಕ ಮಾತ್ರ ಫೊರೆನ್ಸಿಕ್ ಸಾಕ್ಷ್ಯಗಳನ್ನು ಪತ್ತೆ ಹಚ್ಚಬಹುದಾಗಿದೆ ಆದರೆ ಈ ಪ್ರಕರಣದಲ್ಲಿ 11 ದಿನಗಳ ನಂತರ ಮಾದರಿ ಸಂಗ್ರಹಿಸಲಾಗಿತ್ತು. ಅದರಿಂದ ಅತ್ಯಾಚಾರ ನಡೆದಿದೆಯೇ ಎಂದು ದೃಢೀಕರಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದರು.

ಅವರನ್ನು ಆಸ್ಪತ್ರೆಯ ತಾತ್ಕಾಲಿಕ ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾದ ಪ್ರಸ್ತಾವನೆಯನ್ನು ಒಪ್ಪಲಾಗಿಲ್ಲ ಎಂಬ ಪತ್ರ ಅವರಿಗೆ ಅಕ್ಟೋಬರ್ 16ರಂದು ತಲುಪಿದ್ದರೆ ಇಂದು ದೊರೆತ ನೋಟಿಸಿನಲ್ಲಿ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಜವಾಹರಲಾಲ್ ನೆಹರು ಕಾಲೇಜಿನ 11 ಮಂದಿ ಮುಖ್ಯ ವೈದ್ಯಾಧಿಕಾರಿಗಳ ಪೈಕಿ ಆರು ಮಂದಿಗೆ ಕೋವಿಡ್ ಸೋಂಕು ತಗಲಿದ ನಂತರ  ಅಝೀಮ್ ಅವರನ್ನು ಆಗಸ್ಟ್ ತಿಂಗಳಲ್ಲಿ ನೇಮಕ ಮಾಡಲಾಗಿತ್ತು. ನರೇಶ್ ಕುಮಾರ್ ಎಂಬವರ ಬದಲಿಗೆ ನೇಮಕಗೊಂಡಿದ್ದ ಅಝೀಮ್ ಅವರ ಹುದ್ದೆಯನ್ನು ನವೆಂಬರ್ ತನಕ ವಿಸ್ತರಿಸುವ ಉದ್ದೇಶವಿತ್ತು ಆದರೆ ಈಗ ಅವರನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.

ತಮ್ಮ ಹೇಳಿಕೆ ಮಾಧ್ಯಮದಲ್ಲಿ ಬಂದ ನಂತರ  ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು ಉಪಕುಲಪತಿಗಳು ತರಾಟೆಗೆ ತೆಗೆದುಕೊಂಡಿದ್ದರು ಎಂದೂ ಅಝೀಮ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News