ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಚುನಾವಣಾ ಅಕ್ರಮ: ಸಲೀಮ್ ಅಹ್ಮದ್ ಆರೋಪ

Update: 2020-10-20 14:08 GMT

ಬೆಂಗಳೂರು, ಅ.20: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದ್ದು, ಅವರಿಗೆ ಸೋಲಿನ ಅನುಭವವಾಗಿರುವುದರಿಂದ, ನಮ್ಮ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ದೂರಿದ್ದಾರೆ.

ಮಂಗಳವಾರ ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ದೂರು ದಾಖಲಿಸಿದ್ದು, ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದರು.

ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಾವೆ ಗೆಲ್ಲುತ್ತೇವೆ. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡು ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂದು ಸಲೀಮ್ ಅಹ್ಮದ್ ದೂರಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಮುಕ್ತ ಮತದಾನಕ್ಕೆ ಗುರುತಿನ ಚೀಟಿ ನೀಡಲಾಗಿದೆ. ಆದರೆ, ಆರ್.ಆರ್.ನಗರದಲ್ಲಿ ಗುರುತಿನ ಚೀಟಿಗಳನ್ನು ಪಡೆದುಕೊಂಡು ತಲಾ ಐದು ಸಾವಿರ ರೂ.ಗಳನ್ನು ಹಂಚುತ್ತಿದ್ದಾರೆ. ಒಬ್ಬ ಅಭ್ಯರ್ಥಿ ಚುನಾವಣೆಗೆ 28 ಲಕ್ಷ ರೂ.ಖರ್ಚು ಮಾಡಬೇಕು. ಆದರೆ, ಇಲ್ಲಿ ಮತದಾರನ ಗುರುತಿನ ಚೀಟಿ ಖರೀದಿಗೆ 2.5 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗ ಬಿಜೆಪಿ ಅಭ್ಯರ್ಥಿಯನ್ನು ಈ ಚುನಾವಣೆಯಿಂದ ಅನರ್ಹ ಗೊಳಿಸಬೇಕು ಎಂದು ದೂರು ನೀಡಿದ್ದೇವೆ. ನಾಳೆ ಸಂಜೆಯೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೀರ್ ಸಾದಿಕ್ ಎಂದು ಟೀಕಿಸಿರುವ ಡಿಸಿಎಂ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಗಾರಿದ ಉಗ್ರಪ್ಪ, ಮೈತ್ರಿ ಸರಕಾರ ಪತನಕ್ಕೆ ಯಾರು ಕಾರಣ ಎಂಬ ವಿಚಾರದ ಬಗ್ಗೆ ಚರ್ಚೆ ಮಾಡಲು ಧಮ್ ಇದ್ದರೆ ಬಹಿರಂಗ ಚರ್ಚೆಗೆ ಬರಲಿ. ನಾವು ನಮ್ಮ ಅಭ್ಯರ್ಥಿ ಜೊತೆ ಬರುತ್ತೇವೆ. ಅವರು ಅವರ ಅಭ್ಯರ್ಥಿ ಜೊತೆ ಬರಲಿ, ವಿಧಾನಸೌಧದ ಪೂರ್ವ ದ್ವಾರದ ಮುಂದೆಯೆ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಮಾತನಾಡಿ, ಮುನಿರತ್ನ ಈ ಹಿಂದೆಯೂ ಚುನಾವಣಾ ಅಕ್ರಮವೆಸಗಿದ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ ಪ್ರಕರಣವು ದಾಖಲಾಗಿದೆ. ಈಗಲೂ ಅದೇ ಪ್ರಯತ್ನದಲ್ಲೇ ಚುನಾವಣೆಗೆ ಗೆಲ್ಲೋಕೆ ಹೊರಟಿದ್ದಾರೆ. ಇದರ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆರ್.ಆರ್.ನಗರ ಹೆಚ್ಚು ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ, ಪೊಲೀಸ್ ಆಯುಕ್ತರು ಹೆಚ್ಚು ಗಮನ ಹರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News