ತಂತ್ರಜ್ಞಾನದಿಂದಲೇ ಸರ್ವ ಸಮಸ್ಯೆಗಳಿಗೂ ಪರಿಹಾರ: ಡಾ.ಅಶ್ವತ್ಥ ನಾರಾಯಣ

Update: 2020-10-20 15:16 GMT

ಬೆಂಗಳೂರು, ಅ.20: ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ಬಹುತೇಕ ಎಲ್ಲ ಸಮಸ್ಯೆಗಳಿಗೂ ತಂತ್ರಜ್ಞಾನವೇ ಪರಿಹಾರ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ ಆನ್‍ಲೈನ್ ಮೂಲಕ ಪ್ರವೇಶಾತಿ ಪಡೆಯುವ ಪ್ರಕ್ರಿಯೆಗೆ ಬೆಂಗಳೂರಿನಿಂದಲೆ ವರ್ಚುಯಲ್ ವೇದಿಕೆ ಮೂಲಕ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಇದೇ ಮೊದಲ ಬಾರಿಗೆ ಆನ್‍ಲೈನ್ ಮೂಲಕವೇ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ವ್ಯವಸ್ಥೆಯನ್ನು ಶ್ರೀ ಕೃಷ್ಣದೇವರಾಯ ವಿವಿ ರೂಪಿಸಿದೆ. ಈವರೆಗೂ ಎಲ್ಲಿಯು ಇಂಥ ವ್ಯವಸ್ಥೆ ಇರಲಿಲ್ಲ. ಪ್ರವೇಶ, ಶುಲ್ಕ ಪಾವತಿ, ಸೀಟು ಹಂಚಿಕೆ, ರೋಸ್ಟರ್ ಸೇರಿ ಎಲ್ಲ ಪ್ರಕ್ರಿಯೆಗಳು ಆನ್‍ಲೈನ್‍ನಲ್ಲಿಯೇ ನಡೆಯಲಿವೆ. ಇತರೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೆಲ್ಲವೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಅವರು ಕರೆ ನೀಡಿದರು.

ಕೋವಿಡ್‍ನಂಥ ಮಾರಕ, ವೇಗವಾಗಿ ಹರಡುವ ಸೋಂಕಿನ ಕಾಲದಲ್ಲಿ ಮನೆಯಿಂದಲೇ ಸುರಕ್ಷಿತವಾಗಿ ವಿದ್ಯಾರ್ಥಿಗಳು ವಿವಿಯಲ್ಲಿನ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪೋಷಕರಿಗೂ ಇದರಿಂದ ಹೆಚ್ಚು ಅನುಕೂಲವಾಗಿದೆ. ಶ್ರೀ ಕೃಷ್ಣದೇವರಾಯ ವಿವಿಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಅಶ್ವತ್ಥ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನ ಬಳಕೆಯಾಗಲಿ: ಇವತ್ತು ಕೋವಿಡ್ ಅನ್ನು ಹತ್ತಿಕ್ಕಲು ತಂತ್ರಜ್ಞಾನವೇ ದೊಡ್ಡ ಶಕ್ತಿಯಾಗಿ ನಮ್ಮ ಕೈಹಿಡಿದೆ. ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಸರಿಹೊಂದುವ ತಂತ್ರಜ್ಞಾನ ನಮ್ಮಲ್ಲಿ ವಿಪುಲವಾಗಿ ಲಭ್ಯವಿದೆ. ಅದನ್ನು ಬಳಕೆ ಮಾಡಿಕೊಳ್ಳಲು ಹಿಂಜರಿಯಬಾರದು. ಅಗತ್ಯಕ್ಕೆ ತಕ್ಕಂತೆ ಅದನ್ನೂ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ತಂತ್ರಜ್ಞಾನದ ಬಗ್ಗೆ ಹಿಂಜರಿಕೆ ಇದ್ದರೆ ನಾವು ಹಿಂದುಳಿದುಬಿಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈಗಾಗಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಇಲಾಖೆಯಲ್ಲಿ ‘ಇ-ಆಫೀಸ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆನ್‍ಲೈನ್ ಅಪ್ಲಿಯೇಷನ್ ವ್ಯವಸ್ಥೆ ಮೂಲಕ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಇಲಾಖೆಯಲ್ಲಿ ಹಿಂದೆಂದೂ ಕಾಣದಂಥ ಪಾರದರ್ಶಕತೆ ಮತ್ತು ಆಡಳಿತದಲ್ಲಿ ಜವಾಬ್ದಾರಿತನವನ್ನು ತರಲಾಗಿದೆ ಎಂದು ಅವರು ನುಡಿದರು.

ಆನ್‍ಲೈನ್ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News