ಪ್ರವಾಹ: ನಲುಗಿದ ಉತ್ತರ ಕರ್ನಾಟಕ

Update: 2020-10-21 06:10 GMT

ನಾಲ್ಕು ದಿನ ಎಡಬಿಡದೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ನೀರು ನುಗ್ಗಿದೆ. ಸಾವಿರಾರು ಜನರ ಬದುಕು ಅಸ್ತವ್ಯಸ್ತವಾಗಿದೆ. ಸುಮಾರು ಇಪ್ಪತ್ತು ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ. ಭೀಮಾ ಹಾಗೂ ಕಾಗಿನಾ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಮಹಾರಾಷ್ಟ್ರ ರಾಜ್ಯ ಹೇಳದೆ ಕೇಳದೆ ನೀರು ಹೊರಬಿಡುತ್ತಿರುವುದರಿಂದ ಪರಿಸ್ಥಿತಿ ಉಲ್ಬಣಗೊಂಡಿದೆ. ಭೂಸೇನೆ, ವಾಯುಸೇನೆಯ ಯೋಧರು ಮತ್ತು ಅರೆಸೇನಾಪಡೆಗಳು ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಒಂದೆಡೆ ಮನೆ ಬಾಗಿಲಿಗೆ ಬಂದ ನೀರು, ಇನ್ನೊಂದೆಡೆ ಕೊರೋನ ಕಾಟ, ಸಾಂಕ್ರಾಮಿಕ ರೋಗಗಳ ಭೀತಿ ಹೀಗಾಗಿ ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬೀದರ್ ಜಿಲ್ಲೆಗಳ ಜನರ ಬದುಕು ಚಿಂತಾಜನಕವಾಗಿದೆ.

ಬೀದಿಗೆ ಬಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕಾರ್ಯವನ್ನೇನೋ ರಕ್ಷಣಾ ಪಡೆಗಳು ಮಾಡುತ್ತಿವೆ. ಅದರೆ ಇಂತಹ ಸಂದರ್ಭದಲ್ಲಿ ನೆಲೆ ಕಳೆದುಕೊಂಡವರ ಕೈ ಹಿಡಿಯಬೇಕಾದ ಜನಪ್ರತಿನಿಧಿಗಳು ಹಾಗೂ ಸಚಿವರು ಎಲ್ಲೂ ಕಾಣುತ್ತಿಲ್ಲ. ರಾಜ್ಯದ ಕಂದಾಯ ಸಚಿವ ಅಶೋಕ್ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಟಾಚಾರಕ್ಕೆ ಹೀಗೆ ಬಂದು ಹಾಗೇ ಹೋದರು. ನೆರೆಯಿಂದ ತೊಂದರೆಗೊಳಗಾದ ಜನರನ್ನು ಮಾತಾಡಿಸುವಷ್ಟು, ಸಂತೈಸುವಷ್ಟು ಸಮಯವಾಗಲಿ, ಸಹನೆಯಾಗಲಿ ಅವರಲ್ಲಿ ಕಾಣಲಿಲ್ಲ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಸಂಸದರನ್ನು ಕಂದೀಲು ಹಚ್ಚಿ ಹುಡುಕಬೇಕಾಗಿದೆ. ಆದರೆ ಅವರೆಲ್ಲ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮುಳುಗಿದ್ದಾರೆ. ಅವರಿಗೆ ಜನರ ಸಂಕಷ್ಟಕ್ಕಿಂತ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಮುಖ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಸಚಿವರು, ಶಾಸಕರು ಹಾಗೂ ಸಂಸದರು ಸ್ಥಳದಲ್ಲಿ ಇದ್ದು ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಂಡರೆ ಪರಿಹಾರ ಕಾರ್ಯಗಳು ಚುರುಕಾಗಿ ನಡೆಯುತ್ತವೆ.ಇನ್ನು ಮುಖ್ಯಮಂತ್ರಿಯವರು ಇನ್ನಷ್ಟೇ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆಯನ್ನು ನಡೆಸಲಿದ್ದಾರೆ. ಇದು ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದ ಇಂದಿನ ಸ್ಥಿತಿ.

ಆದರೆ ಪ್ರವಾಹ ಪೀಡಿತ ಪ್ರದೇಶಗಳ ಜನರ ಗೋಳು ಇಲ್ಲಿಗೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಈಗ ಪ್ರವಾಹದ ನೀರಿನ ಮಟ್ಟ ಇಳಿದಿದೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಬುಧವಾರದಿಂದ ಮತ್ತೆ ಭಾರೀ ಮಳೆಯಾಗುವ ಸಂಭವವಿದೆ. ಪ್ರವಾಹದಿಂದ ನೆಲೆ ಕಳೆದುಕೊಂಡ ಜನರಿಗಾಗಿ ಜಿಲ್ಲಾಡಳಿತಗಳು ಕಾಳಜಿ ಕೇಂದ್ರಗಳನ್ನೇನೋ ತೆರೆದಿವೆ. ಆದರೆ ಅಲ್ಲಿ ಯಾವುದೇ ಸೌಕರ್ಯಗಳು ಇಲ್ಲವೆಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ಕೇಂದ್ರಗಳಲ್ಲಿ ಅನೇಕ ಬಾಣಂತಿಯರಿದ್ದಾರೆ. ಅವರ ಕೂಸುಗಳಿಗೆ ಸ್ನಾನ ಮಾಡಿಸಲು ಬಿಸಿ ನೀರಿನ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲ, ಕನಿಷ್ಠ ಊಟ, ತಿಂಡಿ, ಹೊದಿಕೆ, ಔಷಧಿಗಳ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಯಾವುದೇ ತುರ್ತು ಪರಿಹಾರ ಕಾರ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೂ ಕೆಲ ಮಂತ್ರಿಗಳು ಮತ್ತು ಶಾಸಕರು ಅದರ ನೆಪ ಹೇಳುತ್ತಿರುವುದು ಸರಿಯಲ್ಲ. ಚುನಾವಣೆ ಬಂದಾಗ ಮತದಾರರ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ಇಂತಹ ಕಷ್ಟ ಕಾಲದಲ್ಲಿ ಅವರನ್ನು ಸಂತೈಸಲು ಬಾರದಿರುವುದು ಸರಿಯಲ್ಲ.

ಒಂದು ಅಧಿಕೃತ ಅಂದಾಜಿನ ಪ್ರಕಾರ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಅತಿವೃಷ್ಟಿಯಿಂದ 9,653 ಕೋಟಿ ರೂ. ನಷ್ಟವುಂಟಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು ಹನ್ನೊಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಉದ್ದು ಈ ಮಳೆಯಿಂದಾಗಿ ಬಹುತೇಕ ನಾಶವಾಗಿವೆ. ಸುಮಾರು ಐದು ಸಾವಿರ ಕೋಟಿ ರೂ. ವೌಲ್ಯದ ಮೂಲ ಸೌಕರ್ಯಗಳು ನಷ್ಟವಾಗಿವೆೆ. ಆದರೂ ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಸಂಪೂರ್ಣ ನಿರ್ಲಕ್ಷ ಧೋರಣೆ ತಾಳಿದೆ. ಪ್ರಧಾನ ಮಂತ್ರಿ ಕಾಟಾಚಾರದ ಟ್ವೀಟ್ ಮಾಡಿದರೆ ಜನರ ಸಂಕಷ್ಟ ನಿವಾರಣೆಯಾಗುವುದಿಲ್ಲ. ಕಳೆದ ವರ್ಷದ ಪ್ರವಾಹ ಪರಿಹಾರವನ್ನೇ ಸರಿಯಾಗಿ ಕೊಡದ ಕೇಂದ್ರ ಸರಕಾರ ಈ ಬಾರಿ ನೆರವಿಗೆ ಬರುತ್ತದೆ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಈಗ ರಾಜ್ಯ ಸರಕಾರವೇ ತನ್ನೆಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಕಾರ್ಯಕ್ಕೆ ಮುಂದಾಗಬೇಕಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳ ಜೊತೆಗೆ ಮೂಲ ಸೌಕರ್ಯಗಳ ಮರು ಸ್ಥಾಪನೆಗೆ ಸರಕಾರ ಆದ್ಯತೆ ನೀಡಬೇಕು. ರೈತರಿಗೆ ಕೊಡಬೇಕಾದ ಬೆಳೆ ಪರಿಹಾರ, ಬೆಳೆ ವಿಮೆಯನ್ನು ವಿಳಂಬ ಮಾಡದೆ ತಕ್ಷಣ ನೀಡಬೇಕು. ಮನೆಮಾರು ಕಳೆದುಕೊಂಡವರಿಗೆ ಆದಷ್ಟು ಬೇಗ ತಕ್ಕ ಪರಿಹಾರ ನೀಡಬೇಕು. ಪರಿಹಾರಕ್ಕಾಗಿ ಸಂತ್ರಸ್ತರು ಸರಕಾರಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ಕಷ್ಟ ಕಾಲದಲ್ಲಿ ಸರಕಾರ ಜನರ ಕೈ ಹಿಡಿಯಬೇಕು.

ಕಳೆದ ವರ್ಷ ಮಾತ್ರವಲ್ಲ ಮೂರು ವರ್ಷಗಳ ಹಿಂದೆ ನೆರೆ ಹಾವಳಿ ಉಂಟಾದಾಗ ಮನೆ ಮಾರು ಕಳೆದುಕೊಂಡವರಿಗೆ ಇಲ್ಲಿಯ ತನಕ ಸೂಕ್ತ ಪರಿಹಾರ ಕಲ್ಪಿಸಲು ಈ ಸರಕಾರದಿಂದ ಸಾಧ್ಯವಾಗಿಲ್ಲ. ಈ ಬಾರಿ ಹಾಗಾಗಬಾರದು. ಕೋವಿಡ್ ಭೀತಿ ಮತ್ತು ಪ್ರವಾಹ ಎರಡರಿಂದಲೂ ತತ್ತರಿಸಿ ಹೋಗಿರುವ ನೊಂದ ಜನರ ನೆರವಿಗೆ ತಕ್ಷಣ ಬರಬೇಕು.

ಇನ್ನೊಂದು ನೋವಿನ ಮತ್ತು ಖಂಡನೀಯ ಸಂಗತಿಯೆಂದರೆ ಪ್ರವಾಹದಿಂದ ನೊಂದವರ ಕಾಳಜಿ ಕೇಂದ್ರಗಳಲ್ಲೂ ಜಾತೀಯತೆ ತಾಂಡವವಾಡುತ್ತಿದೆ. ಅಸ್ಪಶ್ಯ ದಲಿತ ಸಮುದಾಯಗಳ ಬಗ್ಗೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News