ಚಿರಾಗ್, ತೇಜಸ್ವಿ ಯಾದವ್ ಜೊತೆ ವೇದಿಕೆ ಹಂಚಿಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್

Update: 2020-10-21 04:16 GMT

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿರುವ ನಡುವೆಯೇ ಮೂವರು ಕಟ್ಟಾ ವಿರೋಧಿ ಮುಖಂಡರು ಒಂದೆಡೆ ಸೇರಿದ ಕ್ಷಣಕ್ಕೆ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸ್ಮಾರಕ ಸಾಕ್ಷಿಯಾಯಿತು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಕಟ್ಟಾ ವಿರೋಧಿಗಳೆನಿಸಿದ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆ ವೇದಿಕೆ ಹಂಚಿಕೊಂಡರು. ಈ ಫೋಟೊ ಪ್ರಸಕ್ತ ಚುನಾವಣೆಯ ಅತ್ಯಪರೂಪದ ಚಿತ್ರ ಎನಿಸಿಕೊಂಡಿದೆ.

ನಿತೀಶ್ ಕುಮಾರ್ ಅವರು ಉಭಯ ವಿರೋಧಿ ಮುಖಂಡರ ಜತೆ ಸಂಭಾಷಣೆಯಲ್ಲಿ ತೊಡಗಿದ್ದನ್ನು ಸಾವಿರಾರು ಕ್ಯಾಮೆರಾ ಹಾಗೂ ಮೊಬೈಲ್ ಫೋನ್‍ಗಳು ಸೆರೆ ಹಿಡಿದವು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್ ಜತೆ ಮಾತನಾಡಿದ್ದು ಇದೇ ಮೊದಲು ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ. ಚಿರಾಗ್ ಅವರ ತಂದೆಯ ನಿಧನದ ಬಳಿಕ ಪ್ರತಿಬಾರಿ ಉಭಯ ಮುಖಂಡರು ಭೇಟಿಯಾದಾಗಲೂ, ನಿತೀಶ್ ಉದ್ದೇಶಪೂರ್ವಕವಾಗಿ ಮುಖ ತಿರುಗಿಸಿಕೊಂಡಿದ್ದರು.

ನಿತೀಶ್ ಕುಮಾರ್ ಅವರ ಧೀರ್ಘಾವಧಿ ರಾಜಕೀಯ ಸಹವರ್ತಿಯಾಗಿದ್ದ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರು ಅಕ್ಟೋಬರ್ 8ರಂದು ನಿಧನರಾಗಿದ್ದರು. ಪಾಸ್ವಾನ್ ಅವರ ಪಾರ್ಥಿವ ಶರೀರವನ್ನು ಪಾಟ್ನಾ ವಿಮಾನ ನಿಲ್ದಾಣಕ್ಕೆ ತಂದ ಸಂದರ್ಭದಲ್ಲಿ ನಿತೀಶ್ ಅವರ ಪಾದ ಮುಟ್ಟಿ ನಮಸ್ಕರಿಸಿದರೂ ಮುಖ್ಯಮಂತ್ರಿ ಅದಕ್ಕೆ ಸ್ಪಂದಿಸಿರಲಿಲ್ಲ ಎಂದು ಚಿರಾಗ್ ಆಪಾದಿಸಿದ್ದರು. ತಮ್ಮ ತಂದೆಗೆ ನಿತೀಶ್ ಅವಮಾನ ಮಾಡಿದ್ದಾರೆ ಎಂದೂ ಚಿರಾಗ್ ಬಿಜೆಪಿಗೆ ದೂರು ನೀಡಿದ್ದರು. ತಂದೆ ತೀವ್ರ ಅಸ್ವಸ್ಥರಾಗಿದ್ದಾಗ ಕೂಡಾ ನನ್ನ ಬಳಿ ಅಥವಾ ತಾಯಿಯ ಬಳಿ ಒಂದು ಸಾಂತ್ವನದ ಮಾತನ್ನೂ ಹೇಳಿರಲಿಲ್ಲ ಎಂದು ದೂರಿದ್ದರು.

ಮಂಗಳವಾರ ಚಿರಾಗ್ ಪಾಸ್ವಾನ್ ಅವರು ನಿತೀಶ್ ಕುಮಾರ್ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡಿದ್ದಾಗಿ ಪಕ್ಷದ ಕಚೇರಿ ಹೇಳಿಕೆ ನೀಡಿದೆ. ನಿತೀಶ್, ಚಿರಾಗ್ ಹಾಗೂ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಜತೆಗೆ ಕುಳಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News