ಕನಕಪುರದ 'ಬಂಡೆ' ಛಿದ್ರವಾಗಲಿದೆ, 'ಹೌದು ಹುಲಿಯಾ' ಕಾಡಿಗೆ ಹೋಗುತ್ತದೆ: ನಳೀನ್ ಕುಮಾರ್ ಕಟೀಲು

Update: 2020-10-21 11:47 GMT

ಬೆಂಗಳೂರು, ಅ. 21: ಜೆಡಿಎಸ್‍ನ ಕುಟುಂಬ ರಾಜಕಾರಣ ಮತ್ತು ಕಾಂಗ್ರೆಸ್ ಗೂಂಡಾಗಿರಿಯಿಂದ ಬೇಸತ್ತ ಎರಡೂ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಲಿದೆ. ಹೀಗಾಗಿ ಎರಡೂ ಪಕ್ಷಗಳಲ್ಲಿ ತಳಮಳ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಇಂದಿಲ್ಲಿ ಹೇಳಿದ್ದಾರೆ.

ಬುಧವಾರ ಇಲ್ಲಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಅಲ್ಲಿ ಇಬ್ಬಿಬ್ಬರು ನಾಯಕರು. ಒಬ್ಬರು ಆರ್.ಆರ್.ನಗರದ ಅಭ್ಯರ್ಥಿ ಗೆಲ್ಲಿಸಬೇಕೆಂದರೆ, ಮತ್ತೊಬ್ಬರು ಶಿರಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಮನಸ್ಥಿತಿಯಲ್ಲಿದ್ದಾರೆಂದು ಟೀಕಿಸಿದರು.

ಉಪ ಚುನಾವಣೆ ಬಳಿಕ ಕನಕಪುರದ `ಬಂಡೆ' ಛಿದ್ರವಾಗಲಿದ್ದು, `ಹೌದು ಹುಲಿಯಾ' ಕಾಡಿಗೆ ಹೋಗಬೇಕಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದ ಕಟೀಲು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಬ್ರಿಟೀಷರ ರೀತಿ ಒಡೆದು ಆಳುವ ರಾಜಕೀಯ ಮಾಡಿದರು. ದ್ವೇಷದ ರಾಜಕೀಯ ಮಾಡಿ ಹಿಂದೂ-ಮುಸ್ಲಿಂ ಬೇರೆ ಮಾಡುವುದರ ಜತೆಗೆ ಲಿಂಗಾಯತ ಧರ್ಮ ಒಡೆಯಲು ಸಿದ್ದರಾಮಯ್ಯ ಮುಂದಾದರು ಎಂದು ವಾಗ್ದಾಳಿ ನಡೆಸಿದರು.

ಧೈರ್ಯವಿಲ್ಲ: ನಗರದ ದೇವರಜೀವನಹಳ್ಳಿ ಗಲಭೆ ಕಾಂಗ್ರೆಸ್ ಮುಖಂಡರ ನಡುವಿನ ಗಲಾಟೆಯೇ ಕಾರಣ. ಮಾಜಿ ಮೇಯರ್ ಬಂಧಿಸಿ ಎನ್ನುವ ಶಕ್ತಿಯೂ ಅವರಿಗೆ ಇಲ್ಲವಾಗಿದೆ. ಅದು ಹೋಗಲಿ ಕನಿಷ್ಠ ಪಕ್ಷ ನ್ಯಾಯಾಂಗ ತನಿಖೆ ನಡೆಸಿ ಎಂದು ಆಗ್ರಹಿಸುವ ಧೈರ್ಯವೂ ಅವರಿಗೆ ಇಲ್ಲವಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿರುವ ವೇಳೆ ಕೇವಲ ಒಬ್ಬನ ಮನೆಗೆ ಬೆಂಕಿ ಹಾಕುವುದಿಲ್ಲ, ಇಡೀ ರಾಜ್ಯಕ್ಕೆ ಬೆಂಕಿ ಹಾಕುತ್ತಾರೆ ಎಂದು ಆರೋಪಿಸಿದರು.

ನೀವು ಏನು ಮಾಡಿದಿರಿ?: ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಏಕೆ ಸುಮ್ಮನೆ ಇದ್ದರು. ಏಕೆ ನಿಯಂತ್ರಿಸಲು ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಡ್ರಗ್ ಪೆಡ್ಲರ್ ಜತೆಗೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕ ಇತ್ತು. ಹೀಗಾಗಿ ಅಂದು ಸಿದ್ದರಾಮಯ್ಯ ಡ್ರಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.

ಅಧಿಕಾರ ಬೇಕಾದಾಗ ಪ್ರೇಮ ವಿವಾಹ ಮಾಡಿಕೊಳ್ಳುವ ಜೆಡಿಎಸ್, ಅಧಿಕಾರ ಹೋದಾಗ ಬೈದಾಡಿಕೊಳ್ಳುತ್ತಾರೆ. ಅಪ್ಪ ಒಂದು ಪಾರ್ಟಿ ಪರ ಮಾತನಾಡುತ್ತಾರೆ, ಮಗ ಒಂದು ಪಾರ್ಟಿ ಪರ ಮಾತನಾಡುತ್ತಾರೆ ಎಂದು ಟೀಕಿಸಿದ ಕಟೀಲು, ರಾಜ್ಯದಲ್ಲಿ ಬಿಜೆಪಿ ಅಭಿವೃದ್ದಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಡ್ರಗ್ಸ್ ದಂಧೆ ಸೇರಿದಂತೆ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News