ರಾಜ್ಯ ರಾಜಧಾನಿಯಲ್ಲಿ ವರುಣನ ಆರ್ಭಟ: ಧರೆಗುರುಳಿದ ಮರಗಳು, ಜನಜೀವನ ಅಸ್ತವ್ಯಸ್ತ

Update: 2020-10-21 11:49 GMT

ಬೆಂಗಳೂರು, ಅ.21: ರಾಜಧಾನಿಯಲ್ಲಿ ಮಂಗಳವಾರ ತಡರಾತ್ರಿವರೆಗೂ ಸುರಿದ ಮಹಾಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. 

ನಗರದ ಕೆಂಗೇರಿಯಲ್ಲಿ 124.5 ಮಿ.ಮೀ., ಆರ್.ಆರ್ ನಗರ 123.5 ಮಿ.ಮೀ., ಲಕ್ಕಸಂದ್ರ 115 ಮಿ.ಮೀ., ಗೊಟ್ಟಿಗೆರೆಯಲ್ಲಿ 101 ಮಿ.ಮೀ. ಹಾಗೂ ದಕ್ಷಿಣ ವಲಯದ ವಿದ್ಯಾಪೀಠದಲ್ಲಿ 99 ಮಿ.ಮೀ. ಮಳೆಯಾಗಿದೆ.

ಸೌಂದರ್ಯ ಲೇಔಟ್ ಬಡಾವಣೆಯ ಸಿದ್ದೇಶ್ವರ ಲೇಔಟ್ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ಪಂಪ್ ಬಳಸಿ ನೀರು ಹೊರ ಹಾಕುತ್ತಿದ್ದಾರೆ. ಗುರುದತ್ತ ಲೇಔಟ್‍ನಲ್ಲಿ ನೀರುಗಾಲುವೆಯ ಗೋಡೆ ಕುಸಿದಿದ್ದು, ದುರಸ್ತಿಪಡಿಸಲಾಗುತ್ತಿದೆ. ಅಲ್ಲದೆ ಆರ್.ಆರ್ ನಗರದ ಮೀನಾಕ್ಷಿ ಕಲ್ಯಾಣ ಮಂಟಪ, ಬಿಇಎಂಎಲ್ ಲೇಔಟ್, ಹಲವಾರು ಮನೆ, ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ಪಾಲಿಕೆ ಸಿಬ್ಬಂದಿ ತಂಡ ನೀರು ಹೊರಹಾಕುವ ಕೆಲಸದಲ್ಲಿ ತೊಡಗಿದೆ.

ಬನಶಂಕರಿಯ ಎರಡನೇ ಮುಖ್ಯ ರಸ್ತೆ, ಬಸವನಗುಡಿ, ಹೊಸಕೆರೆಹಳ್ಳಿ ಕ್ರಾಸ್ ಮುಖ್ಯ ರಸ್ತೆ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ್ದು, ಬಿದ್ದ ಮರಗಳ ತೆರವು ಕಾರ್ಯ ಮುಂದುವರಿದಿದೆ. ಕೋರಮಂಗಲದ ಸೋನಿ ವರ್ಲ್ಡ್ ಸಿಗ್ನಲ್ ಸಮೀಪ ನಾಲ್ಕನೇ ಮುಖ್ಯ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಬೆಳಗ್ಗೆಯೂ ವಾಹನ ಸವಾರರು ನೀರು ನಿಂತ ರಸ್ತೆಯಲ್ಲಿ ಪರದಾಡಬೇಕಾಯಿತು.

ಕೋರಮಂಗಲ ರಸ್ತೆ ಸಂಪರ್ಕಿಸುವ ಶಾಂತಿನಗರದ ಕರ್ಲಿ ಸ್ಟ್ರೀಟ್ ಮುಖ್ಯ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದ ಅಪಾಯಕಾರಿ ಸ್ಥಿತಿಯಲ್ಲಿ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಅಲ್ಲದೆ ಕೋರಮಂಗಲದ ನೀಲಸಂದ್ರ ಮುಖ್ಯ ರಸ್ತೆಯಲ್ಲೂ ನೀರು ತುಂಬಿದ್ದು, ಅಗ್ನಿಶಾಮಕ ಇಲಾಖೆ ಸಹಾಯದಿಂದ ವಾಹನಗಳನ್ನು ಜನ ಹೊರ ತಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News