ನೋಟ್ ಬ್ಯಾನ್-ಲಾಕ್‍ಡೌನ್‍ನಿಂದ ಆರ್ಥಿಕ ವಲಯಕ್ಕೆ ಹೊಡೆತ:ಸಿದ್ದರಾಮಯ್ಯ

Update: 2020-10-21 13:49 GMT

ಹುಬ್ಬಳ್ಳಿ, ಅ.21: ನೋಟ್ ಬ್ಯಾನ್, ಜಿಎಸ್‍ಟಿ ಜಾರಿ ನಂತರ ಸಾಕಷ್ಟು ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ಸಮಸ್ಯೆ ಹೆಚ್ಚಾಯಿತು. ಲಾಕ್ ಡೌನ್ ನಂತರದ ಅವಧಿಯಲ್ಲಿ ಕೈಗಾರಿಕೆ, ಕೃಷಿ, ವ್ಯಾಪಾರ ವಾಹಿವಾಟು ಕುಂಠಿತವಾಗಿ ನಿರುದ್ಯೋಗ ಮಿತಿಮೀರಿ ಹೋಗಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಬಂದ ನಂತರ ಭಾರತದ ಜಿಡಿಪಿ ಶೇ.24ರಷ್ಟು ಕುಸಿತ ಕಂಡಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪರಿಹಾರ ಬಂದಿಲ್ಲ. ಇದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಜನರ ತೆರಿಗೆ ಹಣವನ್ನು ಜನಕಲ್ಯಾಣ ಕಾರ್ಯಗಳಿಗೆ ಬಳಸದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಗೆ ದ್ರೋಹ ಬಗೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಶಿ-ಮಥುರಾಗಳು ದೇಶದ ಸಮಸ್ಯೆ ಅಲ್ಲ, ಜನರಿಗೆ ಇದು ಬೇಕಾಗಿಲ್ಲ. ಕೊರೋನ ಭೀಕರತೆಗೆ ಜನ ಬದುಕು ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಅವರ ಬದುಕಿಗೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ಸರಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಕೆದಕಿ ರಾಜಕಾರಣ ಮಾಡುವುದು ಜನದ್ರೋಹದ ಕೆಲಸ ಎಂದು ಸಿದ್ದರಾಮಯ್ಯ ಹೇಳಿದರು.

ಅತಿವೃಷ್ಟಿ, ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು ವ್ಯರ್ಥ. ಯಾವ ಅಧಿಕಾರಿಗಳು ಹೋಗಿ ಪ್ರವಾಹದಿಂದ ಉಂಟಾದ ನಷ್ಟದ ಸರ್ವೇ ಮಾಡಿದ್ದಾರೆ? ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದಾರೆ? ಜನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುವ ಬದಲು ಎಲ್ಲೋ ದೂರದಲ್ಲಿ ಸಭೆ ಮಾಡಿದರೆ ಏನು ಉಪಯೋಗ? ಎಂದು ಅವರು ಹೇಳಿದರು.

ಇದೇ ತಿಂಗಳು 25, 26 ಮತ್ತು 27 ರಂದು ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ನಾನು ಮುಖ್ಯಮಂತ್ರಿ ರೀತಿ ವೈಮಾನಿಕ ಸಮೀಕ್ಷೆ ನಡೆಸದೇ, ರಸ್ತೆ ಮಾರ್ಗವಾಗಿ ಕಾರಿನಲ್ಲಿ ಹೋಗಿ ಜನರ ಸಮಸ್ಯೆ ಆಲಿಸು ತ್ತೇನೆ. ಈ ಬಾರಿ 15 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದರೂ, ಇದುವರೆಗೂ ಕೇಂದ್ರ ತಂಡ ಭೇಟಿ ನೀಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯದ ಬಿಜೆಪಿ ಸರಕಾರ ಆಂತರಿಕ ಬಿಕ್ಕಟ್ಟಿನಿಂದ ಪತನಗೊಂಡರೆ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ನಾವಾಗಿ ಈ ಸರಕಾರವನ್ನು ಉರುಳಿಸಲು ಹೋಗುವುದಿಲ್ಲ. ಅಡ್ಡಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಈ ಬಿಜೆಪಿ ಸರಕಾರ ಬಹಳ ದಿನ ಉಳಿಯಲು ಸಾಧ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಎಚ್.ಡಿ. ದೇವೇಗೌಡರಿಗೆ ನನ್ನಿಂದ ತೊಂದರೆಯಾಗಿದ್ದರೆ ಅವರು ಮಾತನಾಡುತ್ತಾರೆ. ಅವರ ಪರವಾಗಿ ಮಾತನಾಡುವ ಅಧಿಕಪ್ರಸಂಗತನ ಈ ನಳಿನ್ ಕುಮಾರ್ ಕಟೀಲ್ ಗೆ ಯಾಕೆ? ಅವರ ಪಕ್ಷದ ಶಾಸಕನೇ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳ್ಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಈ ಕಟೀಲ್‍ಗಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಚುನಾವಣೆ ಹತ್ತಿರ ಬಂದಾಗ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಸುರಿಸುವುದು, ಕಿರುಕುಳ ಕೊಟ್ಟಿದ್ದರು ಅನ್ನೋದು ಎಲ್ಲವೂ ರಾಜ್ಯದ ಜನರಿಗೆ ಸಾಮಾನ್ಯವಾಗಿದೆ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ, ಯಾವೊಬ್ಬ ಶಾಸಕನೂ ನನ್ನ ವಿರುದ್ಧ ಇರಲಿಲ್ಲ. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಯಾರೂ ಪಕ್ಷ ಬಿಟ್ಟು ಹೋಗ್ತಾ ಇರಲಿಲ್ಲ. ಕುಣಿಯೋಕೆ ಬಾರದವಳು ನೆಲ ಡೊಂಕು ಅಂದಳಂತೆ ಹಾಗಾಯ್ತು ಇವರ ಕತೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News