ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಆರೋಗ್ಯ, ಕ್ಲಿನಿಕಲ್ ಸೇವೆ ಜಾರಿಗೊಳಿಸಿ: ಗೌರವ್ ಗುಪ್ತಾ

Update: 2020-10-21 15:31 GMT

ಬೆಂಗಳೂರು, ಅ.21: ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಕ್ಲಿನಿಕಲ್ ಸೇವೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಮುಖ್ಯ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಬುಧವಾರ ಬಿಬಿಎಂಪಿಯ ಆರೋಗ್ಯ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಮುಖ್ಯ ಆರೋಗ್ಯಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಪಾಲಿಕೆ ಆಸ್ಪತ್ರೆಗಳಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ರೋಗಗಳಲ್ಲಿ ಪರಿಣತಿ ಪಡೆದ ತಜ್ಞರನ್ನು ಗೌರವಧನದಲ್ಲಿ ಕರೆಸಲಾಗುತ್ತಿದ್ದು, ಈ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಿ ಹಾಗೂ ಸರಕಾರ ಜಾರಿಗೆ ತರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರ ಮತ್ತು ಕಚೇರಿ ವಲಯದ ಅಧಿಕಾರಿಗಳನ್ನು ನೇಮಿಸಬೇಕು. ಪಾಲಿಕೆ ವ್ಯಾಪ್ತಿಗೆ ಒಳಪಡುವ ರೆಫರಲ್ ಆಸ್ಪತ್ರೆಗಳಿಗೆ ಹೊಸದಾಗಿ ಸರಬರಾಜಾಗಿರುವ ಎಕ್ಸರೇ ಯಂತ್ರಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ನಗರದಲ್ಲಿ ಸೊಳ್ಳೆ ನಿಯಂತ್ರಣ ವ್ಯವಸ್ಥೆಗೆ ಫಾಗಿಂಗ್ ಹಾಗೂ ಸೋಂಕು ನಿವಾರಕ ಸಿಂಪಡಣೆ ಮಾಡುವ ಬಗ್ಗೆ ಮಾಹಿತಿ ಪಡೆದು, ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ನಿಯಮಾನುಸಾರ ಕನಿಷ್ಠ ವೇತನ ನೀಡುವ ಕಡೆ ಗಮನವಹಿಸಬೇಕು ಹಾಗೂ ಸಮರ್ಪಕವಾಗಿ ಎಲ್ಲಾ ಕಡೆ ಫಾಗಿಂಗ್ ಮತ್ತು ಸೋಂಕು ನಿವಾರಕ ಸಿಂಪಡಣೆ ಮಾಡಲು ಸೂಚಿಸಿದರು.

ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮಾತನಾಡಿ, ಉದ್ದಿಮೆ ಪರವಾನಗಿ ನೀಡುವುದು, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ, ರಾಷ್ಟ್ರೀಯ ಆರೋಗ್ಯ ಯೋಜನೆಗಳನ್ನು ಸ್ಥಳೀಯ ಮಟ್ಟಡಲ್ಲಿ ಕಾರ್ಯಗತಗೊಳಿಸುವುದು, ಪ್ಲಾಸ್ಟಿಕ್ ಮಾರಾಟ ಮಳಿಗೆಗಳು ಹಾಗೂ ತಂಬಾಕು ಮಾರಟ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಯಂತ್ರಣಕ್ಕೆ ತರುವುದು, ಮೇಯರ್ ಹಾಗೂ ಪಾಲಿಕೆ ಸದಸ್ಯರುಗಳ ವೈದ್ಯಕೀಯ ಅನುದಾನ ನೀಡುವುದು, ಫಾಗಿಂಗ್ ಹಾಗೂ ಸೋಂಕು ನಿವಾರಕ ಸಿಂಪಡಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News