ಮಳೆ ಅನಾಹುತ ಪ್ರದೇಶಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಭೇಟಿ

Update: 2020-10-21 15:32 GMT

ಬೆಂಗಳೂರು, ಅ.21: ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿವರೆಗೂ ಸುರಿದ ಮಳೆಯಿಂದ ಹಲವು ಬಡವಾಣೆಗಳು ಜಲಾವೃತ ವಾಗಿದ್ದು, ನಗರದ ಗುರುದತ್ತ ಲೇಔಟ್ ನಲ್ಲಿ ಆಗಿರುವ ಅನಾಹುತ ಸ್ಥಳಕ್ಕೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರಾಕಾರ ಮಳೆಯಾದ ಪರಿಣಾಮ ಹಲವಡೆ ಸಮಸ್ಯೆಯಾಗಿದೆ. ಈ ಪೈಕಿ ರಾಜ ಕಾಲುವೆಗಳಲ್ಲಿ ನೀರಿನ ಹರಿವಿನ ಮಟ್ಟವನ್ನು ತಡೆಯಲು ಅಲ್ಲಲ್ಲಿ ರೀಚಾಜಿರ್ಂಗ್ ಪಾಯಿಂಟ್‍ಗಳನ್ನು ನಿರ್ಮಿಸಿದರೆ ಯಾವುದೇ ಸಮಸ್ಯೆ ಯಾಗುವುದಿಲ್ಲ. ನೀರಿನ ಹರಿವನ್ನು ಕಡಿಮೆ ಮಾಡಲು ಸೂಕ್ತಕ್ರಮ ಕೈಗೊಳ್ಳಬೇಕಿದೆ. ನಗರದಲ್ಲಿ ಇದ್ದಕ್ಕಿದ್ದ ಹಾಗೆ ಧಾರಾಕಾರ ಮಳೆ ಆಗುವ ಪರಿಣಾಮ ಕೆಲವೆಡೆ ಹೆಚ್ಚು ಸಮಸ್ಯೆ ಆಗುತ್ತಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ತಿಳಿಸಿದರು.

ಮಂಗಳವಾರದಂದು 75 ರಿಂದ 150 ಮಿ.ಮೀಟರ್ ಮಳೆಯಾಗಿದೆ. ಪಾಲಿಕೆ ವತಿಯಿಂದ ರಾಜಕಾಲುವೆ ಹಾಗೂ ಜಲಮಂಡಳಿ ವತಿಯಿಂದ ಸ್ಯಾನಿಟರಿ ಕೆಲಸ ನಡೆಯುತ್ತಿದೆ. ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಅದನ್ನು ಕೂಡಲೆ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ 1,100 ಕಟ್ಟಗಳನ್ನು ತೆರವು ಮಾಡಲಾಗಿದ್ದು, 700 ಕಟ್ಟಡಗಳ ತೆರವು ಕಾರ್ಯ ನಡೆಯಬೇಕಿದೆ. ಕೋವಿಡ್ ಹಿನ್ನೆಲೆ ನವೆಂಬರ್ ವರೆಗೂ ಯಾವುದೇ ತೆರವು ಕಾರ್ಯ ನಡೆಯಬಾರದೆಂದು ನ್ಯಾಯಾಲಯ ಸೂಚನೆ ನೀಡಿದೆ. ಈ ಕಾರಣಕ್ಕಾಗಿ ಅದನ್ನು ಕಾರ್ಯರೂಪಕ್ಕೆ ತರಲು ಆಗಲಿಲ್ಲ. ನವೆಂಬರ್ ಬಳಿಕ ತೆರವು ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ 842 ಕಿ.ಮೀ ಇದ್ದು, ಈಗಾಗಲೇ 400 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ, ಆರ್.ಸಿ.ಸಿ ಗೋಡೆ ನಿರ್ಮಿಸ ಲಾಗಿದೆ. ಇನ್ನುಳಿದ 400 ಕಿ.ಮೀ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ.  ಪ್ರತಿ ವರ್ಷ ಹೂಳೆತ್ತುವ ಕಾರ್ಯ ಕೈಗೊಂಡು, ನೀರು ಸರಾಗ ವಾಗಿ ಅರಿಯಲು ವ್ಯವಸ್ಥೆ ಮಾಡಲಾಗುವುದು. ಇಂದು ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಪಾಲಿಕೆಯು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಧಾರಾಕಾರ ಮಳೆಯಾದ ಪರಿಣಾಮ ಗುರುದತ್ತ ಲೇಔಟ್ ನಲ್ಲಿ ನೀರುಗಾಲುವೆಗೆ ಕಟ್ಟಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಇಪ್ಪತ್ತು ವರ್ಷದ ಹಿಂದೆ ಕಟ್ಟಿರುವ ತಡೆಗೋಡೆಯಾಗಿದ್ದು, ಇದನ್ನು ತೆಗೆದು ಹೊಸದಾಗಿ ಕಟ್ಟುವ ಕೆಲಸ ನಡೆಯುತ್ತಿದೆ. ಜೊತೆಗೆ ಜಲಮಂಡಳಿ ವತಿಯಿಂದ ಒಳ ಚರಂಡಿ ಕೆಲಸ ನಡೆಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News