ದೇಶದ ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಜಯಲಕ್ಷ್ಮಿ ರಾಮನನ್ ನಿಧನ

Update: 2020-10-21 15:36 GMT

ಬೆಂಗಳೂರು, ಅ.21: ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ನೇಮಕಗೊಂಡಿದ್ದ ದೇಶದ ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಜಯಲಕ್ಷ್ಮಿ ರಾಮನನ್(96) ಜಯನಗರದಲ್ಲಿರುವ ಅವರ ಪುತ್ರಿಯ ನಿವಾಸದಲ್ಲಿ ಅ.18ರಂದು ನಿಧನ ಹೊಂದಿದರು ಎಂದು ತಿಳಿದು ಬಂದಿದೆ.

ತಮ್ಮ ಜೀವನದ ಕೊನೆಗಳಿಗೆಯವರೆಗೆ ಯಾರ ನೆರವು ಇಲ್ಲದೆ ಸ್ವತಂತ್ರವಾಗಿ ಬದುಕಿದ ವಿಜಯಲಕ್ಷ್ಮಿ ಹಲಸೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲೆ ಉಳಿದುಕೊಂಡಿದ್ದರು. ವಯೋ ಸಹಜ ಅನಾರೋಗ್ಯದಿಂದಾಗಿ 7 ವರ್ಷಗಳ ನಮ್ಮ ಮನೆಗೆ ಸ್ಥಳಾಂತಗೊಂಡಿದ್ದರು. 10 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರನ್ನು ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಪುನಃ ಮನೆಗೆ ಹಿಂದಿರುಗಿದರು. ರವಿವಾರ ರಾತ್ರಿ ಮಲಗಿದ ಅವರು ಅಲ್ಲೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಅಳಿಯ ಎಸ್‍ವಿಎಲ್ ನಾರಾಯಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಯನಗರದಲ್ಲಿ ಅಳಿಯ ಎಸ್‍ವಿಎಲ್ ನಾರಾಯಣ್ ಹಾಗೂ ಪುತ್ರಿ ಸುಕನ್ಯಾ ಹೊರತುಪಡಿಸಿ, ವಿಜಯಲಕ್ಷ್ಮಿ ಅವರ ಮಗ ಸುಕುಮಾರ್ ರಾಮನನ್ ಲಾಸ್ ಏಂಜಲೀಸ್‍ನಲ್ಲಿ ನೆಲೆಸಿದ್ದಾರೆ. ವಿಜಯಲಕ್ಷ್ಮಿ ಅವರ ಪತಿ ವಿಂಗ್ ಕಮಾಂಡರ್ ಕೆ.ವಿ.ರಾಮನನ್ 1971ರಲ್ಲೆ ಅಸುನೀಗಿದ್ದರು.

ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೂ ರಾಮನನ್ ಹಾಗೂ ವಿಜಯಲಕ್ಷ್ಮಿ ಪಾತ್ರರಾಗಿದ್ದರು. ಆದರೆ, ನನ್ನ ಮಾವ ರಾಮನನ್ ಹಲವು ವರ್ಷಗಳ ಹಿಂದೆಯೆ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು ಎಂದು ನಾರಾಯಣ್ ತಿಳಿಸಿದ್ದಾರೆ.

ವಿಜಯಲಕ್ಷ್ಮಿ 1924ರ ಫೆ.27ರಂದು ಜನಿಸಿದರು. 1943ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಗೆ ಸೇರಿದ ಅವರು, 1948ರಲ್ಲಿ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿನಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿ ಬಾಲ್‍ಫೋರ್ ಸ್ಮಾರಕ ಪದಕ ಹಾಗೂ ಶಸ್ತ್ರಚಿಕಿತ್ಸೆಗಾಗಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಸ್ತ್ರೀರೋಗ ವಿಭಾಗದಲ್ಲಿ ತಜ್ಞ ವೈದ್ಯರಾಗಿದ್ದ ವಿಜಯಲಕ್ಷ್ಮಿ ಎಗ್ಮೋರ್ ಹೆರಿಗೆ ಆಸ್ಪತ್ರೆಯಲ್ಲಿ ಸಹಾಯಕ ಸರ್ಜನ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 1955ರ ಆ.22ರಂದು ಸೇನೆಗೆ ಸೇರಿದರು. ಅವರ ಕರ್ತವ್ಯದ ಅವಧಿಯಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯು ಸೇನೆಯ ಆಸ್ಪತ್ರೆ, ಕಾನ್ಪುರ, ಸಿಕಂದರಬಾದ್ ಸೇರಿದಂತೆ ಇನ್ನಿತರ ಕಡೆ ಸೇವೆ ಸಲ್ಲಿಸಿದ್ದಾರೆ.

ಸ್ತ್ರೀರೋಗ ತಜ್ಞೆಯಾಗಿದ್ದ ವಿಜಯಲಕ್ಷ್ಮಿ, ವೈದ್ಯಕೀಯ ಮಂಡಳಿಯ ಆಡಳಿತಾತ್ಮಕ ವಿಷಯಗಳಲ್ಲೂ ಕೆಲಸ ನಿರ್ವಹಿಸಿದ್ದರು. ಅಲ್ಲದೆ, ನರ್ಸ್‍ಗಳಿಗೆ ಸ್ತ್ರೀರೋಗ ವಿಷಯಗಳಿಗೆ ಸಂಬಂಧಿಸಿದಂತೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. 1962, 1966 ಹಾಗೂ 1971 ಯುದ್ಧದ ಸಂದರ್ಭದಲ್ಲಿ ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಮಾಡುತ್ತಿದ್ದರು.

1977ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿಶಿಷ್ಟ ಸೇವಾ ಪದಕವನ್ನು ನೀಡಿ ಪುರಸ್ಕರಿಸಲಾಯಿತು. 1979ರಲ್ಲಿ ಅವರು ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದಿದರು. ವೈದ್ಯ ವೃತ್ತಿಯೊಂದಿಗೆ ಅವರು, ಕರ್ನಾಟಕ್ ಸಂಗೀತದಲ್ಲೂ ತರಬೇತಿ ಹೊಂದಿದ್ದರು, 15 ವರ್ಷದಲ್ಲಿ ಅವರ ಪ್ರತಿಭೆ ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತಿತ್ತು.

ವಿಜಯಲಕ್ಷ್ಮಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜನ್ನು ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ. ದಿಲ್ಲಿ, ಲಕ್ನೊ, ಸಿಕಂದರಾಬಾದ್ ಹಾಗೂ ಬೆಂಗಳೂರು ಆಲ್ ಇಂಡಿಯಾ ರೇಡಿಯೋ ಕೇಂದ್ರಗಳಿಂದ ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News