ಅತ್ಯಾಚಾರ ಆರೋಪಿ ಬಿಜೆಪಿ ಶಾಸಕ, ಪತ್ನಿಗೆ ಹೈಕೋರ್ಟ್ ನೋಟಿಸ್

Update: 2020-10-21 15:50 GMT

ಡೆಹ್ರಾಡೂನ್, ಅ. 21: ಪ್ರಕರಣವೊಂದಕ್ಕೆ ಸಂಬಂಧಿಸಿ ಉತ್ತರಾಖಂಡ ನ್ಯಾಯಾಲಯ ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ಹಾಗೂ ಅವರ ಪತ್ನಿ ರೀಟಾ ನೇಗಿಗೆ ಬುಧವಾರ ನೋಟಿಸು ಜಾರಿ ಮಾಡಿದೆ. ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ತಾನು ಅವರ ಮಗುವಿಗೆ ಜನ್ಮ ನೀಡಿದ್ದೇನೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸರು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಆದುದರಿಂದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಉತ್ತರಾಖಂಡ ನ್ಯಾಯಾಲಯ ಈ ನೋಟಿಸು ಜಾರಿ ಮಾಡಿದೆ.

ನೇಗಿ ಅವರು ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಆದುದರಿಂದ ತಾನು ಅವರ ಮಗುವಿಗೆ ಜನ್ಮ ನೀಡಿದ್ದೇನೆ. ಅವರ ಪತ್ನಿ ನನಗೆ ಹಣ ನೀಡಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಿಳೆ ಆಗಸ್ಟ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ಸಿಂಗ್ ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯದಲ್ಲಿ  ರಿಟ್ ಅರ್ಜಿ ಸಲ್ಲಿಸಿದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರಕಾರ ಹಾಗೂ ದೂರುದಾರೆ ಮಹಿಳೆಗೆ ಅಕ್ಟೋಬರ್ 19ರಂದು ನಿರ್ದೇಶಿಸಿತ್ತು ಹಾಗೂ ಅಲ್ಲಿಯವರೆಗೆ ಮಹೇಶ್ ಸಿಂಗ್ ಬಂಧನಕ್ಕೆ ತಡೆ ನೀಡಿತ್ತು. ಶಾಸಕ ಹಾಗೂ ಅವರ ಪತ್ನಿಗೆ ನ್ಯಾಯಾಲಯ ನೋಟಿಸು ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ ಎಂದು ಮಹಿಳೆಯ ಪರ ವಕೀಲ ಅವತಾರ್ ಸಿಂಗ್ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News