ಉತ್ತರಪ್ರದೇಶ: ಒಂದೇ ದಿನ ಕೊರೋನ ಸೋಂಕಿಗೆ 41 ಮಂದಿ ಬಲಿ

Update: 2020-10-21 16:44 GMT

ಲಕ್ನೋ, ಅ. 21: ಉತ್ತರಪ್ರದೇಶದಲ್ಲಿ ಕೋರೋನ ಸೋಂಕಿಗೆ ಮತ್ತೆ 41 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಬುಧವಾರ ಇಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,755ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸೆಪ್ಟಂಬರ್ 17ರಿಂದ ನಿರಂತರ ಇಳಿಕೆಯಾಗುತ್ತಿದೆ ಎಂದು ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ. ಸೆಪ್ಟಂಬರ್‌ನಿಂದ ಇಂದಿನ ವರೆಗೆ ಸಕ್ರಿಯ ಕೊರೋನ ಪ್ರಕರಣಗಳಲ್ಲಿ ಶೇ. 57 ಇಳಿಕೆಯಾಗಿದ್ದು, ಆಗ ರಾಜ್ಯದಲ್ಲಿ ಗರಿಷ್ಠ 68,235 ಪ್ರಕರಣಗಳು ದಾಖಲಾಗಿದ್ದವು.

ಪ್ರಸ್ತುತ ರಾಜ್ಯದಲ್ಲಿ 29,364 ಸಕ್ರಿಯ ಪ್ರಕರಣಗಳು ಇವೆ. ಆದರೆ, ಕೊರೋನ ಸೋಂಕಿನಿಂದ 4,25,356 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ 41ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 6,755ಕ್ಕೆ ಏರಿಕೆಯಾಗಿದೆ. ಈಗ ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 4,61,475 ಇದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 92.17ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಂಗಳವಾರ 1.47 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News